ಹೊಸದಿಲ್ಲಿ : ಜಮ್ಮು ಕಾಶ್ಮೀರದ ಎಲ್‌ಓಸಿಯಲ್ಲಿ ಪಾಕ್ ಉಗ್ರರು ಭಾರತೀಯ ಸೈನಿಕರನ್ನು ಗುರಿ ಇರಿಸಿ ಚೀನದ ಉಕ್ಕಿನ ಬುಲೆಟ್‌ಗಳನ್ನು ಬಳಸುತ್ತಿರುವುದಾಗಿ ತಿಳಿದು ಬಂದೆ.
ಈ ನಿಟ್ಟಿನಲ್ಲಿ ಭಾರತೀಯ ಸೈನಿಕರಿಗೆ ವಿಶೇಷ ಬುಲಟ್‌ಪ್ರೂಫ್ ಜ್ಯಾಕೆಟ್‌ಗಳನ್ನು ಒದಗಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಅವಿತು ಕೊಂಡು ಭಾರತೀಯ ಸೈನಿಕರನ್ನು ಗುರಿ ಇರಿಸಿ ದಾಳಿ ಮಾಡುವ ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಗಳು ಈಚೆಗೆ ತಮ್ಮ ದಾಳಿ ವಿಧಾನ ಮತ್ತು ತಾವು ಬಳಸುವ ಸಲಕರಣೆಗಳನ್ನು ಬದಲಾಯಿಸಿರುವುದು ಭಾರತ ಸೇನೆಯ ಗಮನಕ್ಕೆ ಬಂದಿದೆ ಎಂದು ಸೇನಾ ಮೂಲಗಳು ಹೇಳಿವೆ.
ಪಾಕ್ ಉಗ್ರರು ಬಳಸುವ ಚೀನೀ ಉಕ್ಕಿನ ಬುಲೆಟ್‌ಗಳು ಅತ್ಯಂತ ಹಾನಿಕಾರಕವಾಗಿದ್ದು ಅವು ಸೈನಿಕರ ದೇಹವನ್ನು ಹೊಕ್ಕು ಛಿದ್ರವಿಛಿದ್ರ ಗೊಳಿಸುತ್ತವೆ. ಈ ಉಕ್ಕಿನ ಬುಲೆಟ್ ದಾಳಿಯನ್ನು ನಿಭಾಯಿಸಲು ಭಾರತೀಯ ಸೈನಿಕರಿಗೆ ವಿಶೇಷ ಬುಲೆಟ್ ಪ್ರೂಫ್ ಜ್ಯಾಕೆಟ್‌ಗಳ ಅಗತ್ಯವಿದೆ ಎಂದು ಸೇನಾ ವಕ್ತಾರ ಹೇಳಿದ್ದಾರೆ.
ಕಳೆದ ವರ್ಷ ಡಿ.31ರಂದು ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ ಉಗ್ರರು ಪುಲ್ವಾಮಾದಲ್ಲಿ ನಡೆಸಿದ್ದ ದಾಳಿಯಲ್ಲಿ ಈ ಉಕ್ಕಿನ ಬುಲೆಟ್‌ಗಳನ್ನು ಬಳಸಿಕೊಂಡು ಐವರು ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.