Advertisement

ಪಾಕಿಸ್ತಾನದ ಕತೆ: ಉಡುಗೊರೆಯ ಫ‌ಲ

07:13 PM Nov 23, 2019 | mahesh |

ವಾಲಿದ್‌ ಎಂಬ ಬಡ ಯುವಕ ವೃದ್ಧಳಾದ ತಾಯಿಯೊಂದಿಗೆ ವಾಸವಾಗಿದ್ದ. ಅವನ ಮನೆಯ ಬಳಿ ಎದೆಯ ತನಕ ಎತ್ತರ ಬೆಳೆದಿದ್ದ ಹಸಿರುಹುಲ್ಲು ತುಂಬಿದ ಹೊಲವಿತ್ತು. ಪ್ರತಿದಿನ ಬೆಳಗ್ಗೆ ಅದರಿಂದ ಹುಲ್ಲು ಕತ್ತರಿಸಿ ತಾನು ಹೊರುವಷ್ಟು ದೊಡ್ಡ ಕಟ್ಟು ಮಾಡುತ್ತಿದ್ದ. ಅದನ್ನು ತೆಗೆದುಕೊಂಡು ಕುದುರೆಗಳನ್ನು ಸಾಕುತ್ತಿದ್ದ ಒಬ್ಬ ಧನಿಕನ ಮನೆಗೆ ಹೋಗುತ್ತಿದ್ದ. ಧನಿಕನು ಕುದುರೆಗಳಿಗಾಗಿ ಹುಲ್ಲು ತೆಗೆದುಕೊಂಡು ಎರಡು ನಾಣ್ಯ ಕೊಡುತ್ತಿದ್ದ. ವಾಲಿದ್‌ ಒಂದು ನಾಣ್ಯದಿಂದ ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡು ತರುತ್ತಿದ್ದ. ಇನ್ನೊಂದು ನಾಣ್ಯವನ್ನು ಒಂದು ಮಣ್ಣಿನ ಕೊಡದೊಳಗೆ ಹಾಕುತ್ತಿದ್ದ.

Advertisement

ತುಂಬ ಸಮಯ ಕಳೆಯಿತು. ವಾಲಿದ್‌ ಮಣ್ಣಿನ ಕೊಡ ನಾಣ್ಯಗಳಿಂದ ತುಂಬಿ ತುಳುಕಿತು. ಅದನ್ನು ತೆಗೆದುಕೊಂಡು ಪೇಟೆಯ ಚಿನಿವಾರರ ಅಂಗಡಿಗೆ ಹೋದ. ಅವರು ನಾಣ್ಯಗಳನ್ನು ತೆಗೆದುಕೊಂಡರು. ಪ್ರತಿಯಾಗಿ ಅವನಿಗೆ ಒಂದು ಚಿನ್ನದ ಬಳೆ ಮತ್ತು ಉಂಗುರವನ್ನು ನೀಡಿದರು. ಅವನು ಅದನ್ನು ಮನೆಗೆ ತಂದ. ತಾಯಿಯೊಂದಿಗೆ, “”ಅಮ್ಮ, ನನ್ನ ಉಳಿತಾಯದಿಂದ ಇದೆರಡು ಒಡವೆಗಳು ದೊರಕಿವೆ. ಇದನ್ನು ಏನು ಮಾಡಲಿ?” ಎಂದು ಕೇಳಿದ. ತಾಯಿ, “”ವಯಸ್ಸಿಗೆ ಕಾಲಿಟ್ಟಿದ್ದೀಯಾ. ಈ ಒಡವೆಗಳನ್ನು ಬಡವಳಾದ ಒಬ್ಬ ಯುವತಿಗೆ ಕೊಟ್ಟು ಅವಳನ್ನು ಮದುವೆ ಮಾಡಿಕೋ. ನನಗೆ ವಯಸ್ಸಾಯಿತು. ಸೊಸೆ ಮನೆಗೆ ಬಂದರೆ ಅವಳು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ” ಎಂದು ಹೇಳಿದಳು.

ತಾಯಿಯ ಮಾತು ವಾಲಿದ್‌ಗೆ ರುಚಿಸಲಿಲ್ಲ. “”ಸುಮ್ಮನಿರಮ್ಮ. ನಾನು ಬಡ ಯುವತಿಯನ್ನು ಮದುವೆಯಾಗುವುದೆ? ಎಂದಿಗೂ ಸಾಧ್ಯವಿಲ್ಲ. ಈ ವಿಧದ ಚಿನ್ನದ ಒಡವೆಗಳನ್ನು ಸಂಪಾದಿಸುವ ಯೋಗ್ಯತೆಯಿರುವವನು ನಾನು. ಅದರ ಮೂಲಕ ಸುಂದರಿಯಾದ ರಾಜಕುಮಾರಿಯನ್ನು ಒಲಿಸಿಕೊಂಡು ಮದುವೆಯಾಗುತ್ತೇನೆ. ಆಮೇಲೆ ನಾವು ಮೂವರೂ ಅರಮನೆಯಲ್ಲಿ ಸುಖವಾಗಿರಬಹುದು. ನಾಳೆಯಿಂದ ಹುಲ್ಲಿನ ಕೆಲಸಕ್ಕೆ ಹೋಗುವುದಿಲ್ಲ” ಎಂದು ಹೇಳಿದ. ಅವನ ಮಾತಿನಿಂದ ತಾಯಿಗೆ ಸಂತೋಷವಾಗಲಿಲ್ಲ. “”ಮಗನೇ, ಆಕಾಶದಲ್ಲಿರುವ ನಕ್ಷತ್ರವನ್ನು ಹಿಡಿಯಲು ಹೋಗಬಾರದು. ಬಡವರಾದ ನಾವು ರಾಜಕುಮಾರಿಯನ್ನು ಬಯಸಿದರೆ ಮೂರ್ಖತನವಾಗುತ್ತದೆ. ನಮ್ಮ ಆಶೆ ಈಡೇರುವುದಿಲ್ಲ, ಇರುವುದರಲ್ಲಿ ಸಂತೃಪ್ತಿ ತಂದುಕೊಳ್ಳಬೇಕು” ಎಂದು ಬುದ್ಧಿ ಹೇಳಿದಳು.

ವಾಲಿದ್‌ ಒಡವೆಗಳೊಂದಿಗೆ ಮನೆಯಿಂದ ಹೊರಗೆ ಬಂದ. ಆಗ ಒಂಟೆಗಳ ಮೇಲೆ ಸರಕು ಹೇರಿಕೊಂಡು ಒಬ್ಬ ವರ್ತಕ ಹೋಗುತ್ತ ಇದ್ದ. ವಾಲಿದ್‌ ಅವನೊಂದಿಗೆ, “”ಪ್ರಪಂಚದಲ್ಲಿ ಅತಿ ಸುಂದರಿಯಾದ ರಾಜಕುಮಾರಿ ಯಾರು?” ಎಂದು ಕೇಳಿದ. “”ಖೈಸ್ತಾನದ ರಾಜಕುಮಾರಿಗಿಂತ ಸುಂದರಿಯರು ಇನ್ನೊಬ್ಬರಿಲ್ಲ ಎಂದು ಹೊಗಳುವುದನ್ನು ಕೇಳಿದ್ದೇನೆ” ಎಂದ ವರ್ತಕ. ವಾಲಿದ್‌, “”ಅಣ್ಣ, ಹಾಗಿದ್ದರೆ ನನಗೊಂದು ಉಪಕಾರ ಮಾಡು. ನಾನು ಒಂದು ಚಿನ್ನದ ಬಳೆ ಕೊಡುತ್ತೇನೆ. ಅದನ್ನು ತೆಗೆದುಕೊಂಡು ಹೋಗಿ ವಾಲಿದ್‌ ಕೊಟ್ಟ ಉಡುಗೊರೆಯೆಂದು ಹೇಳಿ ರಾಜಕುಮಾರಿಗೆ ಒಪ್ಪಿಸಿಬಿಡು. ಪ್ರತಿಯಾಗಿ ನಿನಗೊಂದು ಚಿನ್ನದ ಉಂಗುರವನ್ನು ನೀಡುತ್ತೇನೆ” ಎಂದು ಹೇಳಿದ.

ಉಂಗುರದ ಆಸೆಯಿಂದ ವರ್ತಕ ಅವನ ಮಾತಿಗೆ ಒಪ್ಪಿಕೊಂಡ. ಬಳೆಯನ್ನು ತೆಗೆದುಕೊಂಡು ಹೋಗಿ ಖೈಸ್ತಾನದ ರಾಜಕುಮಾರಿಗೆ ಒಪ್ಪಿಸಿದ. ನವರತ್ನಗಳು ಮಿನುಗುತ್ತಿದ್ದ ಬಳೆಯ ಚಂದ ಕಂಡು ರಾಜಕುಮಾರಿ ಹಿರಿಹಿರಿ ಹಿಗ್ಗಿದಳು. ಅದನ್ನು ಯಾರು ಕಳುಹಿಸಿದರೆಂಬುದನ್ನು ಕೇಳಿ ತಿಳಿದುಕೊಂಡಳು. “”ಇಂತಹ ಬಳೆ ಕೊಡಬೇಕಿದ್ದರೆ ಅವರು ಬಹು ದೊಡ್ಡ ಧನಿಕರೇ ಇರಬಹುದೆನಿಸುತ್ತದೆ. ಸುಮ್ಮಗೆ ಏನನ್ನಾದರೂ ಸ್ವೀಕರಿಸುವುದು ರಾಜಮನೆತನಕ್ಕೆ ಶೋಭೆಯಲ್ಲ. ಒಂದು ಒಂಟೆ ಹೊರುವಷ್ಟು ರೇಷ್ಮೆಯ ವಸ್ತ್ರಗಳನ್ನು ಪ್ರತಿಫ‌ಲವಾಗಿ ಕಳುಹಿಸುತ್ತೇನೆ. ಇದನ್ನು ಅವರಿಗೆ ತಲುಪಿಸಿ” ಎಂದು ವರ್ತಕನಿಗೆ ಹೇಳಿದಳು. ವಸ್ತ್ರಗಳ ನಡುವೆ ತನ್ನ ಒಂದು ಭಾವಚಿತ್ರವನ್ನಿರಿಸಿ ಮೆಚ್ಚುಗೆ ಸೂಚಿಸುವ ಪತ್ರವೊಂದನ್ನು ಅದರ ಜೊತೆಗೆ ಇಟ್ಟಳು.

Advertisement

ವರ್ತಕ ಒಂಟೆಯೊಂದಿಗೆ ವಾಲಿದ್‌ ಬಳಿಗೆ ಬಂದು ಅವನಿಗೆ ಒಪ್ಪಿಸಿದ. ವಾಲಿದ್‌, “”ಜಗತ್ತಿನಲ್ಲಿ ಬಹು ಸುಂದರನೂ ಉದಾರಿಯೂ ಆದ ರಾಜಕುಮಾರರು ಯಾರಾದರೂ ಇದ್ದಾರೆಯೆ?” ಎಂದು ಕೇಳಿದ. ವರ್ತಕ, “”ಯಾಕಿಲ್ಲ? ನೆಕಾಬಾದ್‌ನಲ್ಲಿರುವ ರಾಜಕುಮಾರ ಸುಂದರನೂ ಹೌದು, ಧರ್ಮಿಷ್ಠನೂ ಹೌದು” ಎಂದು ಹೇಳಿದ. ವಾಲಿದ್‌, “”ಹೌದೆ? ಅಣ್ಣ, ಹಾಗಿದ್ದರೆ ನನಗೆ ಒಂದು ಉಪಕಾರ ಮಾಡು. ಈ ರೇಷ್ಮೆ ವಸ್ತ್ರಗಳಲ್ಲಿ ನಿನಗೆ ಇಷ್ಟವಾದುದನ್ನು ತೆಗೆದುಕೋ. ಉಳಿದುದನ್ನು ಒಂಟೆಯ ಸಹಿತ ತೆಗೆದುಕೊಂಡು ಹೋಗಿ ನನ್ನ ಕಾಣಿಕೆಯೆಂದು ಹೇಳಿ ಅವನಿಗೆ ಒಪ್ಪಿಸಿಬಿಡು” ಎಂದು ಕೇಳಿಕೊಂಡ.

ವರ್ತಕ ವಾಲಿದ್‌ ಬೇಡಿಕೆಗೆ ಸಮ್ಮತಿಸಿದ. ಒಂಟೆಯ ಮೇಲಿರುವ ವಸ್ತ್ರಗಳನ್ನು ತೆಗೆದುಕೊಂಡು ಹೋಗಿ ನೆಕಾಬಾದ್‌ನ ರಾಜಕುಮಾರನಿಗೆ ತಲುಪಿಸಿದ. ಅದರಿಂದ ರಾಜಕುಮಾರ ಒಂದು ವಸ್ತ್ರವನ್ನು ತೆಗೆಯುವಾಗ ರಾಜಕುಮಾರಿಯ ಭಾವಚಿತ್ರ ಕಾಣಿಸಿತು. ಅವಳ ಚೆಲುವಿಗೆ ಮನಸೋತ. ಅವಳು ತನಗೆ ಉಡುಗೊರೆ ಕಳುಹಿಸಿರುವಾಗ ತಾನು ಕೂಡ ಪ್ರತಿ ಉಡುಗೊರೆ ಕಳುಹಿಸಿ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಬೇಕೆಂದು ಅವನಿಗೂ ತೋರಿತು. ಮಂತ್ರಿಗಳನ್ನು ಕರೆದು ಇಷ್ಟು ಅಮೂಲ್ಯವಾದ ಉಡುಗೊರೆ ನೀಡಿದವರಿಗೆ ಏನು ಪ್ರತಿಫ‌ಲ ನೀಡಬಹುದೆಂದು ಪ್ರಶ್ನಿಸಿದ. ಅವರು, “”ಇಪ್ಪತ್ತು ಹೇಸರಗತ್ತೆಗಳು ಹೊರುವಷ್ಟು ಬೆಳ್ಳಿಯ ನಾಣ್ಯಗಳನ್ನು ಕಳುಹಿಸಬಹುದು” ಎಂದರು. ರಾಜಕುಮಾರ ನಾಣ್ಯಗಳ ಮೂಟೆಯೊಳಗೆ ತನ್ನ ಭಾವಚಿತ್ರದೊಂದಿಗೆ ಕೃತಜ್ಞತೆ ಸೂಚಿಸುವ ಪತ್ರವನ್ನಿರಿಸಿದ. “”ನನಗೆ ಇಂತಹ ಅಮೂಲ್ಯ ಕೊಡುಗೆ ನೀಡಿದವರಿಗೆ ಈ ಉಡುಗೊರೆಗಳನ್ನು ತೆಗೆದುಕೊಂಡು ಹೋಗಿ ಕೊಡಿ” ಎಂದು ಹೇಳಿದ.

ವರ್ತಕ ವಾಲಿದ್‌ ಬಳಿಗೆ ಬಂದ. “”ಅಯ್ನಾ, ನಿನ್ನ ಜೀವಮಾನವಿಡೀ ಕುಳಿತು ಉಂಡರೂ ಮುಗಿಯದಷ್ಟು ಬೆಳ್ಳಿಯ ನಾಣ್ಯಗಳು ಬಂದಿವೆ. ಇದರಿಂದ ಒಂದು ಮನೆ ಕಟ್ಟಿಸು. ಕೃಷಿ ಮಾಡಲು ಹೊಲಗಳನ್ನು ಕೊಂಡುಕೋ. ಒಬ್ಬ ಬಡ ಹುಡುಗಿಯನ್ನು ವರಿಸಿ ಸುಖದಿಂದ ಜೀವನ ನಡೆಸು” ಎಂದು ಹಿತವಾಗಿ ಹೇಳಿದ. ಅವನ ಮಾತು ವಾಲಿದ್‌ಗೆ ಹಿಡಿಸಲಿಲ್ಲ. “”ನನಗೆ ಬುದ್ಧಿವಂತಿಕೆ ಕಮ್ಮಿಯಿದೆಯೆಂದು ಭಾವಿಸಬೇಡ. ಇದೇ ಉಪಾಯದಿಂದ ನಾನು ರಾಜಕುಮಾರಿಯ ಕೈ ಹಿಡಿದು ಅರಮನೆಯನ್ನು ಸೇರುವ ಕಾಲ ಸನ್ನಿಹಿತವಾಗಿದೆ. ನೀನು ಇದರಲ್ಲಿ ಎರಡು ಕತ್ತೆಗಳನ್ನು ನಾಣ್ಯಗಳೊಂದಿಗೆ ತೆಗೆದುಕೋ. ಹದಿನೆಂಟು ಕತ್ತೆಗಳನ್ನು ಖೈಸ್ತಾನದ ರಾಜಕುಮಾರಿಗೆ ಒಪ್ಪಿಸಿ ಬಾ” ಎಂದು ಹೇಳಿಬಿಟ್ಟ.

ವರ್ತಕ ನಾಣ್ಯಗಳೊಂದಿಗೆ ಖೈಸ್ತಾನ್‌ ರಾಜಕುಮಾರಿಯ ಬಳಿಗೆ ಬಂದ. ನಾಣ್ಯಗಳನ್ನು ಕಂಡು ರಾಜಕುಮಾರಿಗೆ ಸಂತೋಷವಾಯಿತು. ಒಂದು ಚೀಲವನ್ನು ಬಿಡಿಸಿದಳು. ರಾಜಕುಮಾರನ ಭಾವಚಿತ್ರ ಮತ್ತು ಪತ್ರ ಸಿಕ್ಕಿತು. ಅವಳಿಗೆ ಅವನ ಚಂದ ನೋಡಿ ಸಂತೋಷವಾಯಿತು. ವರ್ತಕನೊಂದಿಗೆ, “”ಈ ಉಡುಗೊರೆಗಳನ್ನು ಯಾಕೆ ಕಳುಹಿಸುತ್ತಿದ್ದಾರೆ? ನನ್ನಿಂದ ಅವರಿಗೆ ಏನಾದರೂ ಕೆಲಸವಾಗಬೇಕಾಗಿದೆಯೆ?” ಎಂದು ಕೇಳಿದಳು. “”ರಾಜಕುಮಾರಿ, ಅವನಿಗೆ ನಿಮ್ಮನ್ನು ಮದುವೆಯಾಗಬೇಕೆಂಬ ಬಯಕೆ ಇದೆ. ತಾವು ಸಮ್ಮತಿಸಿದರೆ ನಿಮ್ಮ ಬಳಿಗೆ ಅವನನ್ನು ಕಳುಹಿಸಿಕೊಡುತ್ತೇನೆ” ಎಂದನು ವರ್ತಕ. “”ಅಯ್ಯೋ ದೇವರೇ, ನನಗೂ ಚೆಲುವನಾದ ಅವರ ಕೈ ಹಿಡಿಯುವುದು ಇಷ್ಟವೇ. ನಾಳೆಯ ದಿನ ಪರಿವಾರದವರನ್ನು, ಒಂಟೆಗಳನ್ನು ಕೂಡಿಕೊಂಡು ಅವರನ್ನು ವಿವಾಹವಾಗಲು ಬರುತ್ತೇನೆ. ಎಲ್ಲ ತಯಾರಿಗಳೂ ನಡೆಯಲಿ. ಈ ವಿಷಯವನ್ನು ಪ್ರತ್ಯೇಕವಾಗಿ ದೂತರ ಮೂಲಕ ಅವರಿಗೂ ತಿಳಿಸುತ್ತೇನೆ” ಎಂದಳು ರಾಜಕುಮಾರಿ.

ವರ್ತಕ ಈ ವಿಷಯ ತಿಳಿಸಿದಾಗ ವಾಲಿದ್‌ ಕಂಗೆಟ್ಟುಹೋದ. “”ರಾಜಕುಮಾರಿ ನನ್ನನ್ನು ನೋಡಲು ಬಂದರೆ ನನ್ನ ಗುಟ್ಟು ಹೊರಬೀಳುತ್ತದೆ. ನನಗೆ ಶಿಕ್ಷೆಯಾಗುತ್ತದೆ” ಎಂದು ಅಳತೊಡಗಿದ. ವರ್ತಕ, “”ಸ್ವರ್ಗದಲ್ಲಿರುವ ತಂದೆ ಪೆರಿಸ್‌ನನ್ನು ಪ್ರಾರ್ಥಿಸಿಕೋ. ಅವನು ಕಣ್ಮುಂದೆ ಬಂದಾಗ ಒಂದು ದಿನದ ಮಟ್ಟಿಗೆ ಅರಮನೆಯೊಂದನ್ನು ಸೃಷ್ಟಿಸಿ ಕೊಡುವಂತೆ ಕೇಳಿಕೋ. ಮದುವೆಯಾದ ಬಳಿಕ ರಾಜಕುಮಾರಿಯ ಜೊತೆಗೆ ಅವಳ ಮನೆಗೆ ಹೋಗಿಬಿಡು” ಎಂದು ದಾರಿ ತೋರಿಸಿದ. ವಾಲಿದ್‌ ಪ್ರಾರ್ಥಿಸಿದಾಗ ರತ್ನಖಚಿತ ಕಿರೀಟವನ್ನು ಧರಿಸಿದ ಪೆರಿಸ್‌ ಪ್ರತ್ಯಕ್ಷನಾಗಿ, “”ಏನು ಬೇಕು?” ಎಂದು ಕೇಳಿದ. “”ಒಂದು ದಿನವಿಡೀ ನನ್ನದಾಗಿ ಇರುವ ಸಕಲ ಸೌಕರ್ಯಗಳಿಂದ ಕೂಡಿದ ಒಂದು ಅರಮನೆ ಬೇಕು” ಎಂದು ವಾಲಿದ್‌ ಪ್ರಾರ್ಥಿಸಿದ. ಪೆರಿಸ್‌ ಅರಮನೆಯನ್ನು ಸೃಷ್ಟಿಸಿ ಮಾಯವಾದ.

ಮರುದಿನ ರಾಜಕುಮಾರಿ ಸಕಲ ವೈಭವಗಳೊಂದಿಗೆ ಹೊರಟು ಬಂದಳು. ದೂತರ ಮೂಲಕ ತಿಳಿಸಿದ್ದ ಕಾರಣ ನೆಕಾಬಾದ್‌ನ ರಾಜಕುಮಾರನೂ ಅದೇ ದಾರಿಯಾಗಿ ಅವಳನ್ನು ಸ್ವಾಗತಿಸಲು ಬಂದ. ಭಾವಚಿತ್ರದ ಮೂಲಕ ಒಬ್ಬರ ಮುಖ ಒಬ್ಬರಿಗೆ ಪರಿಚಯವಿದ್ದ ಕಾರಣ ಅವನು ಅವಳನ್ನು ಸ್ವಾಗತಿಸಿ ತನ್ನ ಅರಮನೆಗೆ ಕರೆದೊಯ್ದು ವಿಜೃಂಭಣೆಯಿಂದ ಮದುವೆಯಾದ. ವಾಲಿದ್‌ ಕರೆದರೂ ಅವಳಿಗೆ ಅವನ ಪರಿಚಯವಿರದ ಕಾರಣ ಅರಮನೆಗೆ ಬರಲಿಲ್ಲ. ಸಂಜೆಯಾಗುವಾಗ ಅರಮನೆಯೂ ಮಾಯವಾಗಿ ಹೋಯಿತು.

ವಾಲಿದ್‌ ತಾಯಿಯ ಬಳಿಗೆ ಬಂದ. “”ಅಮ್ಮ, ನಿನ್ನ ಮಾತನ್ನು ಮೀರಿ ಆಕಾಶದಲ್ಲಿರುವ ನಕ್ಷತ್ರವನ್ನು ಹಿಡಿಯಲು ಹೋಗಿ ದೊಡ್ಡ ದುಃಖವನ್ನು ಅನುಭವಿಸಿದೆ. ನನ್ನ ಪ್ರಯತ್ನದಿಂದ ರಾಜಕುಮಾರಿಗೆ ಸುಲಭವಾಗಿ ಮದುವೆಯಾಯಿತು. ನಾಳೆಯಿಂದ ಮತ್ತೆ ಹುಲ್ಲಿನ ಕೆಲಸ ಆರಂಭಿಸುತ್ತೇನೆ. ಒಬ್ಬ ಬಡ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯಿಂದ ಬದುಕುತ್ತೇನೆ” ಎಂದು ಹೇಳಿದ. ಅದೇ ರೀತಿ ನಡೆದುಕೊಂಡ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next