ನವದೆಹಲಿ: ಪಾಕಿಸ್ತಾನದ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹೀಬ್ ಸಿಖ್ ಜನಾಂಗದ ಅತ್ಯಂತ ಪವಿತ್ರ ಕ್ಷೇತ್ರ. ಈ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರೂ ತಲೆಯನ್ನು ಕರವಸ್ತ್ರ, ದುಪ್ಪಟ್ಟದಿಂದ ಮುಚ್ಚಿರಬೇಕೆಂಬ ನಿಯಮವಿದೆ.
ಅದನ್ನರಿಯದ ಪಾಕ್ ಮಾಡೆಲ್ ಸ್ವಲಾ ಫ್ರೀ ಹೇರ್ ಬಿಟ್ಟು, ಗುರುದ್ವಾರದ ಎದುರು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಇದು ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಕ್ಷಮೆಯನ್ನೂ ಯಾಚಿಸಿದ್ದಾರೆ. ಸ್ವಲಾ ವಿರುದ್ಧ ತನಿಖೆ ನಡೆಸಿ, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪಾಕ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನಿಯಮ ಉಲ್ಲಂಘನೆ : ಬೀಜ ಸಂಸ್ಕರಣಾ ಘಟಕಗಳಿಗೆ ಅಧಿಕಾರಿಗಳಿಂದ ನೋಟೀಸ್
ಸೋಷಿಯಲ್ ಮೀಡಿಯಾದಲ್ಲಿ ಟೀಕೆ, ವ್ಯಂಗ್ಯ, ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ವಲಾ ತಮ್ಮ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿ, ಇನ್ಸ್ಟಾಗ್ರಾಂನಲ್ಲಿ ಕ್ಷಮೆ ಕೇಳಿದ್ದಾರೆ. ನನಗೆ ಯಾರಿಗೂ ಅವಮಾನ ಮಾಡುವ, ಯಾರ ಭಾವನೆಗೂ ಧಕ್ಕೆ ಉಂಟು ಮಾಡುವ ಉದ್ದೇಶ ಇರಲಿಲ್ಲ. ಕರ್ತಾರಪುರ ಸಾಹೀಬ್ಗೆ ಪ್ರವಾಸಕ್ಕೆ ಹೋಗಿದ್ದೆ. ಅದರ ನೆನಪಿಗಾಗಿ ಫೋಟೋಗಳನ್ನು ತೆಗೆಸಿಕೊಂಡಿದ್ದೆ. ಕರ್ತಾರಪುರದ ಇತಿಹಾಸ, ಸಿಖ್ ಸಮುದಾಯದ ಆಚರಣೆ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ನಾನು ಅಲ್ಲಿಗೆ ಹೋಗಿದ್ದೆ. ನಾನು ಒಂದು ಸಮುದಾಯದ ಸಂಸ್ಕೃತಿ, ನಂಬಿಕೆಗೆ ಧಕ್ಕೆ ತಂದಿದ್ದೇನೆ ಎಂದು ಹೇಳಲಾಗುತ್ತಿದೆ. ಹಾಗೆ ಭಾವಿಸಬೇಡಿ. ನನ್ನ ಮನಸಲ್ಲಿ ಅಂಥ ಭಾವನೆ ಇರಲಿಲ್ಲ, ದಯವಿಟ್ಟು ಕ್ಷಮಿಸಿ ಎಂದು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.