ಇಸ್ಲಾಮಾಬಾದ್: ಪಾಕಿಸ್ತಾನದ ಸಚಿವರೊಬ್ಬರು ಉದ್ಘಾಟನಾ ಸಮಾರಂಭದಲ್ಲಿ ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಉದ್ಘಾಟಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ : ಮೈಸೂರಿನಲ್ಲಿ ಮತ್ತೊಂದು ಹೀನ ಕೃತ್ಯ
ಪಾಕಿಸ್ತಾನದ ಪತ್ರಕರ್ತ ಮುರ್ತಾಝಾ ಅಲಿ ಶಾ ಅವರು ಟ್ವೀಟರ್ ನಲ್ಲಿ 21 ಸೆಕೆಂಡುಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈವರೆಗೆ 48ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸೆಪ್ಟೆಂಬರ್ 2ರಂದು ಬಂಧಿಖಾನೆ ಸಚಿವ ಮತ್ತು ಪಾಕ್ ನ ಪಂಜಾಬ್ ಸರ್ಕಾರದ ವಕ್ತಾರ ಫಯಾಝ್ ಉಲ್ ಹಸ್ಸನ್ ಚೋಹಾನ್ ರಾವಲ್ಪಿಂಡಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರ ಉದ್ಘಾಟನೆಗೆ ಆಗಮಿಸಿದ್ದರು ಎಂದು ವರದಿ ತಿಳಿಸಿದೆ.
ಸಚಿವ ಫಯಾಝ್ ಗೆ ನೀಡಿದ್ದ ಕತ್ತರಿ ಹರಿತವಾಗಿಲ್ಲದ ಕಾರಣ ರಿಬ್ಬನ್ ಅನ್ನು ಕತ್ತರಿಸಲು ಸಾಧ್ಯವಾಗಿಲ್ಲ. ಎರಡನೇ ಬಾರಿ ಪ್ರಯತ್ನಿಸಿದಾಗಲೂ ನಕ್ಕ ಸಚಿವ ತಕ್ಷಣವೇ ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಉದ್ಘಾಟನೆ ನೆರವೇರಿಸಿದ್ದರು. ಈ ಸಂರ್ಭದಲ್ಲಿ ನೆರೆದಿದ್ದವರು ಜೋರಾಗಿ ನಕ್ಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಸ್ವತಃ ಸಚಿವ ಫಯಾಝ್ ಉಲ್ ಹಸ್ಸನ್ ಅವರು ಕೂಡಾ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಸಮಜಾಯಿಷಿ ನೀಡಿದ್ದಾರೆ. ಕತ್ತರಿ ಮೊಂಡಾಗಿದ್ದು, ಇದರಿಂದಾಗಿ ರಿಬ್ಬನ್ ಕತ್ತರಿಸಲು ಸಾಧ್ಯವಾಗಿಲ್ಲವಾಗಿತ್ತು ಎಂದು ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.