ಸಿಯೋಲ್: ದಕ್ಷಿಣ ಕೊರಿಯಾದ ಸಿಯೋಲ್ ನ ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ರಾಜತಾಂತ್ರಿಕರು ಸ್ಟೋರ್ (ಶಾಪ್)ವೊಂದರಲ್ಲಿ ಚಾಕೋಲೇಟ್ ಹಾಗೂ ಟೋಪಿಯನ್ನು ಕದ್ದು ಸಿಕ್ಕಿಬಿದ್ದಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ನಿಂದ ರಾಜ್ಯಮಟ್ಟ ಕೋವಿಡ್ ಸೆಂಟರ್ ಮಾಡುತ್ತೇವೆ: ಡಿ.ಕೆ.ಶಿವಕುಮಾರ್
ಕೊರಿಯಾ ಟೈಮ್ಸ್ ವರದಿ ಪ್ರಕಾರ, ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ಯೊಂಗ್ಸಾನ್ ನ ಇಟಾವೊನ್ ನಲ್ಲಿರುವ ಸ್ಟೋರ್ ವೊಂದರಲ್ಲಿ ಚಾಕೋಲೇಟ್ ಮತ್ತು ಹ್ಯಾಟ್(ಟೋಪಿ) ಅನ್ನು ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಈ ಎರಡು ಘಟನೆಗಳು ಬೇರೆ, ಬೇರೆ ದಿನಾಂಕದಂದು ನಡೆದಿರುವುದಾಗಿ ವರದಿ ವಿವರಿಸಿದೆ.
ಜನವರಿ 10ರಂದು 1.70 ಡಾಲರ್ ಮೌಲ್ಯದ ಚಾಕೋಲೇಟ್ ಟ್ರೀಟ್ಸ್ ಅನ್ನು ಕಳ್ಳತನ ಮಾಡಿದ್ದರೆ, ಫೆಬ್ರುವರಿ 23ರಂದು ಮತ್ತೊಬ್ಬ ರಾಜತಾಂತ್ರಿಕ 10 ಡಾಲರ್ ಮೌಲ್ಯದ ಟೋಪಿಯನ್ನು ಕಳ್ಳತನ ಮಾಡಿರುವುದಾಗಿ ವರದಿ ತಿಳಿಸಿದೆ.
ಟೋಪಿ ಕಳವು ಮಾಡಿದ ಘಟನೆ ನಂತರ ಸ್ಟೋರ್ ನ ಉದ್ಯೋಗಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಇಬ್ಬರು ಆರೋಪಿಗಳ ಗುರುತು ಪತ್ತೆ ಹಚ್ಚಿರುವುದಾಗಿ ದ ಕೊರಿಯಾ ಟೈಮ್ಸ್ ವರದಿ ಮಾಡಿದೆ.
ಪ್ರಕರಣದ ತನಿಖೆಯ ನಂತರ ಇಬ್ಬರು ಅಧಿಕಾರಿಗಳ ವಿರುದ್ಧ ಯಾವುದೇ ದೂರು ದಾಖಲಿಸದೇ ರಾಜತಾಂತ್ರಿಕ ವಿನಾಯ್ತಿ ಮೇಲೆ ಪ್ರಕರಣ ಇತ್ಯರ್ಥಗೊಳಿಸಿರುವುದಾಗಿ ವರದಿ ವಿವರಿಸಿದೆ.