ಇರಾನ್‌ನ ಚಬಾಹರ್ ಬಂದರನ್ನು ಅಭಿವೃದ್ಧಿಪಡಿಸಿದ ಭಾರತದ ನಡೆ ಅಂತಾರಾಷ್ಟ್ರೀಯವಾಗಿ ಬಹಳ ಮಹತ್ವ ಪಡೆದುಕೊಂಡಿದೆ. ಇದು ಮೂರು ದೇಶಗಳ ನಡುವಿನ ವಾಣಿಜ್ಯ ವ್ಯವಹಾರವನ್ನು ಸುಲಭಗೊಳಿಸುತ್ತದೆ ಎನ್ನುವ ಕಾರಣಕ್ಕೆ ಮಾತ್ರವಲ್ಲದೆ, ಇನ್ನೂ ಹಲವು ಕಾರಣಗಳಿಂದಾಗಿ ಮುಖ್ಯವಾಗಿರುವುದರಿಂದ ಜಗತ್ತು ಈ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದೆ. ಕಳೆದ ವರ್ಷವಷ್ಟೇ ಪ್ರಧಾನಿ ನರೇಂದ್ರ ಮೋದಿ ಇರಾನ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಚಬಾಹರ್ ಬಂದರು ಅಭಿವೃದ್ಧಿಪಡಿಸಲು ಭಾರತ ಹೂಡಿಕೆ ಮಾಡುವ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು. ಒಂದೇ ವರ್ಷದಲ್ಲಿ ಬಂದರಿನ ಒಂದು ಹಂತದ ಕಾಮಗಾರಿಗಳು ಪೂರ್ಣಗೊಂಡು ರವಿವಾರ ಉದ್ಘಾಟನೆಯಾಗಿದೆ. ಮೊದಲಾಗಿ ಅಪಾನಿಸ್ಥಾನ, ಇರಾನ್ ಮಾತ್ರವಲ್ಲದೆ ಮಧ್ಯ ಮತ್ತು ಪೂರ್ವ ಏಶ್ಯಾದ ಇತರ ದೇಶಗಳ ಜತೆಗೆ ಪಾಕಿಸ್ಥಾನದ ಹಂಗಿಲ್ಲದೆ ವ್ಯಾಪಾರ ವಹಿವಾಟು ನಡೆಸಲು ಚಬಾಹರ್ ಬಂದರು ರಾಜಮಾರ್ಗವಾಗಲಿದೆ. ಇಷ್ಟರ ತನಕ ಅಫ್ಘಾನಿಸ್ಥಾನಕ್ಕೆ ಪಾಕಿಸ್ಥಾನದ ಮೂಲಕವೇ ಸರಕುಗಳನ್ನು ಸಾಗಿಸಬೇಕಿತ್ತು. ಹೀಗಾಗಿ ಅಲ್ಲಿನ ಸರಕಾರ ಮತ್ತು ಉಗ್ರರ ಮರ್ಜಿ ಕಾಯ್ದುಕೊಂಡು ವ್ಯವಹಾರ ನಡೆಸಬೇಕಾದ ಅನಿವಾರ್ಯತೆ ಇತ್ತು. ಇದೀಗ ಪಾಕಿಸ್ಥಾನಕ್ಕೆ ಹೋಗದೆಯೇ ಅಪಾ^ನಿಸ್ಥಾನಕ್ಕೆ ಸರಕು ಸಾಗಾಟ ಸಾಧ್ಯವಾಗಲಿದೆ. ಚಬಾಹರ್ ಬಂದರಿನಲ್ಲಿ ಇಳಿಸುವ ಸರಕುಗಳನ್ನು ಅಲ್ಲಿಂದ ಭೂಮಾರ್ಗದ ಮೂಲಕ ಅಫ್ಘಾನಿಸ್ಥಾನಕ್ಕೆ ಸಾಗಿಸಬಹುದು. ಇದು ಪಾಕಿಸ್ಥಾನಕ್ಕೆ ಭಾರೀ ದೊಡ್ಡ ಮಟ್ಟದಲ್ಲಿ ಹೊಟ್ಟೆಯುರಿ ಉಂಟುಮಾಡಿರುವ ಜಾಣತನದ ರಾಜತಾಂತ್ರಿಕ ನಡೆ.
ಚಬಾಹರ್ ಬಂದರು ಕೇವಲ ವಾಣಿಜ್ಯ ದೃಷ್ಟಿಯಿಂದ ಮಾತ್ರವಲ್ಲದೆ ವ್ಯೂಹಾತ್ಮಕ ದೃಷ್ಟಿಯಿಂದಲೂ ಮುಖ್ಯವಾಗಿದೆ. ಮಧ್ಯ ಏಶ್ಯಾದ ರಾಜಕೀಯ ಮತ್ತು ಭೌಗೋಳಿಕ ಆಯಾಮಗಳ ಮೇಲೆ ಈ ಬಂದರು ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಈ ಬಂದರನ್ನು ಅಭಿವೃದ್ಧಿಪಡಿಸುವ ಮೂಲಕ ಚೀನಕ್ಕೆ ಭಾರತ ನೇರವಾಗಿ ಸಡ್ಡು ಹೊಡೆದಂತಾಗಿದೆ. ಚಬಾಹರ್‌ನಿಂದ ಬರೀ 100 ಕಿ. ಮೀ. ದೂರದಲ್ಲಿ ಪಾಕಿಸ್ಥಾನದ ಗ್ವಾಡರ್ ಬಂದರು ಇದೆ. ಇದನ್ನು ಚೀನ ಅಭಿವೃದ್ಧಿಪಡಿಸುತ್ತಿದ್ದು, ಇದರ ಪಕ್ಕದಲ್ಲೇ ಭಾರತ ತನ್ನದೊಂದು ಬಂದರು ಅಭಿವೃದ್ಧಿಪಡಿಸುತ್ತಿರುವುದು ಚೀನ ಮತ್ತು ಪಾಕಿಸ್ಥಾನದ ಪಾಲಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿಯೇ ಆರಂಭದಿಂದಲೇ ಪಾಕಿಸ್ಥಾನ ಚಬಾಹರ್ ಬಂದರನ್ನು ಭಾರತ ಅಭಿವೃದ್ಧಿ ಪಡಿಸುತ್ತಿರುವುದಕ್ಕೆ ಕ್ಯಾತೆ ತೆಗೆದಿತ್ತು ಹಾಗೂ ಚೀನವನ್ನು ಪುಸಲಾಯಿಸಿ ಇರಾನ್‌ಗೆ ಕಳುಹಿಸಿತ್ತು. ಆದರೆ ಕೇಂದ್ರ ಸರಕಾರ ಚಬಾಹರ್‌ಗೆ ಸಂಬಂಧಿಸಿದಂತೆ ದೃಢ ನಿಲುವು ತಳೆದ ಪರಿಣಾಮವಾಗಿ ಪಾಕ್ ಆಟ ನಡೆಯಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲೇ ಚಬಾಹರ್ ಕನಸು ಮೊಳಕೆಯೊಡೆದಿತ್ತು. 2003ರಲ್ಲಿ ಭಾರತ ಮತ್ತು ಇರಾನ್ ನಡುವೆ ಚಬಾಹರ್‌ಗೆ ಸಂಬಂಧಿಸಿದಂತೆ ಒಪ್ಪಂದವೂ ಆಗಿತ್ತು. ಆದರೆ ಅನಂತರ ಬಂದ ಸರಕಾರದ ನಿರಾಸಕ್ತಿ ಹಾಗೂ ಇರಾನ್ ಮೇಲೆ ಬಿದ್ದ ಅಂತಾರಾಷ್ಟ್ರೀಯ ನಿಷೇಧದಿಂದಾಗಿ ಚಬಾಹರ್ ನನೆಗುದಿಗೆ ಬಿತ್ತು. ಆದರೆ ಮೋದಿ ಸರಕಾರ ಈ ಬಂದರಿನ ವ್ಯೂಹಾತ್ಮಕ ಮಹತ್ವವನ್ನು ಮನಗಂಡು ಅಭಿವೃದ್ಧಿಪಡಿಸಲು ನಿರ್ಧರಿಸಿತು.
ಚಬಾಹರ್ ಬಂದರಿನ ಸಮೀಪವೇ ಇರಾನ್‌ನ ವಾಯುನೆಲೆ ಮತ್ತು ನೌಕಾನೆಲೆ ಇದೆ ಹಾಗೂ ಇಲ್ಲಿಂದ ಭೂಮಾರ್ಗದಲ್ಲಿ ರಶ್ಯಾ ದಾಟಿ ಹೋಗಿ ಯುರೋಪ್ ತಲುಪಬಹುದು ಎನ್ನುವ ಅಂಶವೇ ಈ ಪ್ರದೇಶ ಎಂತಹ ಆಯಕಟ್ಟಿನ ಜಾಗದಲ್ಲಿದೆ ಎನ್ನುವುದನ್ನು ತಿಳಿಸುತ್ತದೆ. ಶ್ರೀಲಂಕಾದ ಕೊಲಂಬೊ ಮತ್ತು ಹಂಬನ್‌ತೋಟ ಸೇರಿ ಭಾರತದ ನೆರೆಯ ದೇಶಗಳಲ್ಲಿರುವ ಕೆಲವು ಬಂದರುಗಳನ್ನು ಅಭಿವೃದ್ಧಿಪಡಿಸಲು ಚೀನ ಅತೀವ ಆಸಕ್ತಿ ತೋರಿಸುತ್ತಿದೆ. ಇದರಲ್ಲಿ ವಾಣಿಜ್ಯ ಹಿತಾಸಕ್ತಿಗಿಂತಲೂ ಚೀನದ ಸಾಮ್ರಾಜ್ಯ ವಿಸ್ತರಣೆಯ ಮಹತ್ವಾಕಾಂಕ್ಷೆ ಇರುವ ಸುಳಿವು ಸಿಕ್ಕಿದೆ. ಈ ಪರಿಸ್ಥಿತಿಯಲ್ಲಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವನ್ನು ಅನುಸರಿಸುವುದು ಭಾರತದ ಪಾಲಿಗೆ ಅನಿವಾರ್ಯ. ಚಬಾಹರ್ ಬಂದರನ್ನು ಈ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಪ್ರಸ್ತುತ ಇರಾನ್ ಮತ್ತು ಭಾರತದ ನಡುವೆ ಸುಮಾರು 59,000 ಕೋ. ರೂ.ಗಳ ವಾರ್ಷಿಕ ವಾಣಿಜ್ಯ ವಹಿವಾಟು ನಡೆಯುತ್ತಿದೆ. ಇದೇ ವೇಳೆ ಚೀನ ಮತ್ತು ಇರಾನ್ ನಡುವಿನ ವಾಣಿಜ್ಯ ವಹಿವಾಟು 3.4 ಲಕ್ಷ ಕೋ.ರೂ.ಗಳಷ್ಟಿದೆ. ವಾಣಿಜ್ಯ ವಹಿವಾಟಿನಲ್ಲಿ ಸದ್ಯಕ್ಕೆ ಚೀನವನ್ನು ಸರಿಗಟ್ಟಲು ಅಸಾಧ್ಯವಾಗಿದ್ದರೂ ವಾಣಿಜ್ಯ ವಹಿವಾಟಿಗೆ ಉತ್ತೇಜನ ನೀಡುವ ಹೆದ್ದಾರಿಯೊಂದನ್ನು ತೆರೆದುಕೊಟ್ಟಂತಾಗಿದೆ. ಮಧ್ಯ ಏಶ್ಯಾದಲ್ಲಿ ಚೀನದ ಪ್ರಭಾವವನ್ನು ತಗ್ಗಿಸುವುದೇ ಮೋದಿ ಸರಕಾರದ ಮುಖ್ಯ ಗುರಿ. ಈ ನಿಟ್ಟಿನಲ್ಲಿಯೇ ಕಳೆದ ವರ್ಷ ಮೋದಿ ಉಜ್ಬೇಕಿಸ್ಥಾನ್, ತಾಜಿಕಿಸ್ಥಾನ್, ತುರ್ಕಮೆನಿಸ್ಥಾನ್, ಕಿರ್ಗಿಸ್ಥಾನ್ ಮತ್ತು ಕಝಕ್‌ಸ್ಥಾನ್ ದೇಶಗಳ ಪ್ರವಾಸ ಕೈಗೊಂಡಿದ್ದರು. ಇಲ್ಲೆಲ್ಲ ಭಾರತದ ವಾಣಿಜ್ಯ ಹಿತಾಸಕ್ತಿಯನ್ನು ಸ್ಥಾಪಿಸಿ ಈ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಈ ಪ್ರವಾಸದ ಮುಖ್ಯ ಉದ್ದೇಶ. ಚಬಾಹರ್ ಬಂದರು ಅಭಿವೃದ್ಧಿ ಕೂಡ ಇದಕ್ಕೊಂದು ಪೂರಕವಾದ ನಡೆ.