ದುಬೈ: ಪಾಕಿಸ್ತಾನ ಅಕ್ರಮವಾಗಿ ಭಾರತದೊಳಗೆ ಒಳನುಸುಳುಕೋರರನ್ನು ಮತ್ತು ಉಗ್ರರನ್ನು ಛೂಬಿಡುವುದು ಹಳೆಯ ವಿಚಾರ. ಇತ್ತೀಚೆಗೆ ಚೀನಾಗೆ ಅದು ಕತ್ತೆಗಳನ್ನು ರಫ್ತು ಮಾಡಲು ಆರಂಭಿಸಿತ್ತು. ಈಗ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಭಿಕ್ಷುಕರನ್ನು ಅಕ್ರಮವಾಗಿ ಕಳುಹಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ!
ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಭಿಕ್ಷುಕರ ಕಾಟ ಹೆಚ್ಚಾಗಿದೆ. ಭಿಕ್ಷುಕರನ್ನು ಅಕ್ರಮವಾಗಿ ಕಳುಹಿಸುವುದನ್ನು ನಿಲ್ಲಿಸಬೇಕೆಂದು ಈ ಎರಡೂ ದೇಶಗಳು ಪಾಕಿಸ್ತಾನಕ್ಕೆ ಮನವಿ ಮಾಡಿವೆ. ಇತ್ತೀಚೆಗೆ ಮೆಕ್ಕಾ ಮಸೀದಿ ಆವರಣದಲ್ಲಿ ಬಂಧಿತರಾದ ಪಿಕ್ ಪಾಕೆಟರ್‌ಗಳ ಪೈಕಿ ಪಾಕಿಸ್ತಾನಿ ಪ್ರಜೆಗಳೇ ಹೆಚ್ಚು.
ತೀವ್ರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಆಹಾರ ಮತ್ತು ಇಂಧನ ಬೆಲೆ ಕೈಸುಡುವಂತಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ದೊಡ್ಡ ಸಂಖ್ಯೆಯಲ್ಲಿ ಪಾಕಿಸ್ತಾನಿ ಭಿಕ್ಷಕುರು ಲಗ್ಗೆ ಇಡುತ್ತಿದ್ದಾರೆ.
ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಜೈಲಿನಲ್ಲಿರುವ ಭಿಕ್ಷುಕರ ಪೈಕಿ ಶೇ.90ರಷ್ಟು ಮಂದಿ ಪಾಕಿಸ್ತಾನಿಯರೇ ಆಗಿದ್ದಾರೆ. “ಉಮ್ರಾ ವೀಸಾಗಳಡಿ ತೀರ್ಥ ಕ್ಷೇತ್ರಗಳಿಗೆಂದು ಸೌದಿ ಅರೇಬಿಯಾ ಮತ್ತು ಇರಾಕ್‌ಗೆ ಬರುವ ಪಾಕಿಸ್ತಾನೀಯರು, ನಂತರ ಇಲ್ಲಿಯೇ ನೆಲೆಸಿ, ಭಿಕ್ಷೆ ಬೇಡುವುದರಲ್ಲಿ ತೊಡಗುತ್ತಾರೆ’ ಎಂದು ಇರಾಕ್ ಮತ್ತು ಸೌದಿ ಅರೇಬಿಯಾದ ರಾಯಭಾರಿಗಳು ದೂರಿದ್ದಾರೆ.