ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಲಕ್ಷ್ಮಿ ನಗರದಲ್ಲಿ ಪಾಕಿಸ್ತಾನದ ಭಯೋತ್ಪಾದಕನೊಬ್ಬನನ್ನು ಬಂಧಿಸಿದ್ದು, ಆತನ ಬಳಿ ಇದ್ದ ಎಕೆ 47 ರೈಫಲ್, ಹ್ಯಾಂಡ್ ಗ್ರೆನೇಡ್ ಹಾಗೂ ಇತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಎಎನ್ ಐ ಮಂಗಳವಾರ (ಅಕ್ಟೋಬರ್ 12) ವರದಿ ಮಾಡಿದೆ.
ಇದನ್ನೂ ಓದಿ:ಆರ್ ಎಸ್ ಎಸ್ ವಿರುದ್ಧ 1977ರಿಂದಲೂ ನಾನು ಮಾತನಾಡುತ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ
ಬಂಧಿತ ಉಗ್ರನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಲಕ್ಷ್ಮಿ ನಗರದ ರಮೇಶ್ ಪಾರ್ಕ್ ಸಮೀಪ ವಾಸವಾಗಿದ್ದ ಪಾಕ್ ಮೂಲದ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿರುವುದಾಗಿ ವರದಿ ವಿವರಿಸಿದೆ.
ಈತ ಭಾರತದ ಪ್ರಜೆ ಎಂದು ನಕಲಿ ಗುರುತು ಪತ್ರ ಹೊಂದಿದ್ದ. ಶೋಧ ಕಾರ್ಯದ ವೇಳೆ ಎಕೆ 47 ರೈಫಲ್, 60 ಸಜೀವ ಗುಂಡುಗಳು, ಒಂದು ಹ್ಯಾಂಡ್ ಗ್ರೆನೇಡ್ ಹಾಗೂ ಎರಡು ಅತ್ಯಾಧುನಿಕ ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಬಂಧಿತ ಉಗ್ರ ಅಶ್ರಫ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆ(ನಿಗ್ರಹ) ಕಾಯ್ದೆ, ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಇತರ ಕಾಯ್ದೆಗಳಡಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.