ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮವು ಕಳೆದ ವಾರ ನಡೆದಿದ್ದು, ಇಡೀ ವಿಶ್ವದ ಗಮನ ಸೆಳೆದಿತ್ತು. ಆದರೆ ಭಾರತ ಮತ್ತು ಭಾರತೀಯರ ಸಂತೋಷವನ್ನು ಸಹಿಸದ ಪಾಕಿಸ್ತಾನವು ಹೊಸ ಕ್ಯಾತೆ ತೆಗೆದಿದೆ.
ಅಯೋಧ್ಯೆಯಲ್ಲಿ ದಶಕಗಳ ನಂತರ ದೇವಾಲಯ ಮತ್ತು ಮಸೀದಿಯ ವಿವಾದವು ಕೊನೆಗೊಂಡು ದೇವಾಲಯ ನಿರ್ಮಾಣವಾಗಿದೆ. ಆದರೆ ಪಾಕಿಸ್ತಾನವು ಮಂದಿರದ ಬಗ್ಗೆ ದೂರು ನೀಡಲು ವಿಶ್ವಸಂಸ್ಥೆಗೆ (UN) ಔಪಚಾರಿಕವಾಗಿ ಪತ್ರ ಬರೆದಿದೆ.
ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಅತೃಪ್ತಿ ಹೊಂದಿದ್ದು, ಅದರ ಬಗ್ಗೆ ದೂರು ನೀಡಲು ಅವರು ಔಪಚಾರಿಕವಾಗಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.
ವಿಶ್ವಸಂಸ್ಥೆಗೆ ಕಳುಹಿಸಿದ ಪತ್ರದಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್, ಭಾರತದ ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಪ್ರತಿಷ್ಠಾಪನೆಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ ಎಂದು ಬರೆದಿದ್ದಾರೆ. ಈ ಪ್ರವೃತ್ತಿಯು ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಯೋಗಕ್ಷೇಮಕ್ಕೆ ಮತ್ತು ಈ ಪ್ರದೇಶದಲ್ಲಿ ಸಾಮರಸ್ಯ ಮತ್ತು ಶಾಂತಿಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತದೆ. ಭಾರತದಲ್ಲಿ ಇಸ್ಲಾಮಿಕ್ ಪಾರಂಪರಿಕ ತಾಣಗಳ ರಕ್ಷಣೆಗೆ ತುರ್ತು ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಈ ವಿಷಯ ಬಾಬರಿ ಮಸೀದಿಯ ಆಚೆಗೂ ಹೋಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಭಾರತದ ಇತರ ಮಸೀದಿಗಳು ಸಹ ಇದೇ ರೀತಿಯ ಬೆದರಿಕೆಗಳನ್ನು ಎದುರಿಸುತ್ತಿವೆ. ಇದು ಒಂದೇ ಘಟನೆಯಲ್ಲ ಎಂಬುದು ವಿಷಾದನೀಯ. ಏಕೆಂದರೆ ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿ ಸೇರಿದಂತೆ ಇತರ ಮಸೀದಿಗಳು ಅವಮಾನ ಮತ್ತು ವಿನಾಶದ ಅಪಾಯವನ್ನು ಎದುರಿಸುತ್ತಿವೆ ಎಂದು ಅವರು ವಿಶ್ವಸಂಸ್ಥೆಗೆ ಬರೆದಿದ್ದಾರೆ.