ಕರಾಚಿ: ಪ್ರವಾಸಿ ಇಂಗ್ಲೆಂಡ್ ಎದುರಿನ 4ನೇ ಟಿ20 ಪಂದ್ಯವನ್ನು 3 ರನ್ನುಗಳಿಂದ ರೋಚಕವಾಗಿ ಗೆದ್ದ ಪಾಕಿಸ್ಥಾನ, ಸರಣಿಯನ್ನು 2-2 ಸಮಬಲಕ್ಕೆ ತಂದು ನಿಲ್ಲಿಸಿದೆ.
ಇದರೊಂದಿಗೆ ಕರಾಚಿಯ 4 ಪಂದ್ಯಗಳ ಅಭಿಯಾನ ಕೊನೆಗೊಂಡಿದೆ. ಉಳಿದ 3 ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ.
ಮೊಹಮ್ಮದ್ ರಿಜ್ವಾನ್ ಅವರ ಮತ್ತೊಂದು ಅಮೋಘ ಬ್ಯಾಟಿಂಗ್ ಸಾಹಸದಿಂದ ಪಾಕಿಸ್ಥಾನ 4 ವಿಕೆಟಿಗೆ 166 ರನ್ ಗಳಿಸಿತು. ಜವಾಬಿತ್ತ ಇಂಗ್ಲೆಂಡ್ ಡೆತ್ ಓವರ್‌ಗಳಲ್ಲಿ ತೀವ್ರ ಕುಸಿತ ಅನುಭವಿಸಿ 19.2 ಓವರ್‌ಗಳಲ್ಲಿ 163ಕ್ಕೆ ಆಲೌಟ್ ಆಯಿತು.
ಪ್ರಚಂಡ ಫಾರ್ಮ್ ಮುಂದುವರಿಸಿದ ರಿಜ್ವಾನ್ ಕೊನೆಯ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 88 ರನ್ ಬಾರಿಸಿದರು (67 ಎಸೆತ, 9 ಬೌಂಡರಿ, 1 ಸಿಕ್ಸರ್). ಇದು ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ನಾಯಕ ಬಾಬರ್ ಆಜಂ 36 ರನ್ ಮಾಡಿದರು. ಮೊದಲ ವಿಕೆಟಿಗೆ 11.5 ಓವರ್‌ಗಳಿಂದ 97 ರನ್ ಒಟ್ಟುಗೂಡಿತು.
14ಕ್ಕೆ 3 ವಿಕೆಟ್ ಬಿದ್ದಾಗಲೇ ಇಂಗ್ಲೆಂಡಿನ ಸಂಕಟ ಅರಿವಿಗೆ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಹೋರಾಟ ಸಂಘಟಿಸಿತು. ಬೆನ್ ಡಕೆಟ್ (33), ಹ್ಯಾರಿ ಬ್ರೂಕ್ (34), ನಾಯಕ ಮೊಯಿನ್ ಅಲಿ (29), ಲಿಯಮ್ ಡಾಸನ್ (34) ಗೆಲುವಿನ ಆಸೆ ಚಿಗುರಿಸಿದರು. ಆದರೆ ಡೆತ್ ಓವರ್‌ಗಳಲ್ಲಿ ಹ್ಯಾರಿಸ್ ರವೂಫ್ ಘಾತಕ ಬೌಲಿಂಗ್ ಪ್ರದರ್ಶಿಸಿದರು. ಪಾಕ್ ಫೀಲ್ಡಿಂಗ್ ಕೂಡ ಉತ್ತಮ ಮಟ್ಟದಲ್ಲಿತ್ತು.
ಮೊಹಮ್ಮದ್ ನವಾಜ್ ಮತ್ತು ಹ್ಯಾರಿಸ್ ರವೂಫ್ ತಲಾ 3 ವಿಕೆಟ್ ಕಿತ್ತು ಇಂಗ್ಲೆಂಡ್ ಪಾಲಿಗೆ ಕಂಟಕವಾಗಿ ಕಾಡಿದರು. ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್ ಜಯಕ್ಕೆ 4 ರನ್ ಅಗತ್ಯವಿತ್ತು. ಆದರೆ ಕೈಲಿದ್ದದ್ದು ಒಂದೇ ವಿಕೆಟ್. ಮೊಹಮ್ಮದ್ ವಾಸಿಮ್ ಜೂನಿಯರ್ ದ್ವಿತೀಯ ಎಸೆತದಲ್ಲಿ ಟಾಪ್ಲಿ ಅವರನ್ನು ಔಟ್ ಮಾಡಿ ಪಾಕಿಸ್ಥಾನಕ್ಕೆ ರೋಚಕ ಗೆಲುವು ತಂದಿತ್ತರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-4 ವಿಕೆಟಿಗೆ 166 (ರಿಜ್ವಾನ್ 88, ಬಾಬರ್ 36, ಮಸೂದ್ 21, ಟಾಪ್ಲಿ 37ಕ್ಕೆ 2). ಇಂಗ್ಲೆಂಡ್-19.2 ಓವರ್‌ಗಳಲ್ಲಿ 163 (ಬ್ರೂಕ್ 34, ಡಾಸನ್ 34, ಡಕೆಟ್ 33, ಅಲಿ 29, ರವೂಫ್ 32ಕ್ಕೆ 3, ನವಾಜ್ 35ಕ್ಕೆ 3, ಹಸ್ನೇನ್ 40ಕ್ಕೆ 2).
ಪಂದ್ಯಶ್ರೇಷ್ಠ: ಹ್ಯಾರಿಸ್ ರವೂಫ್.