ಲಾಹೋರ್: ಭಾರೀ ಭದ್ರತೆಯ ನಡುವೆ ನಡೆದ ವಿಶ್ವ ಇಲೆವೆನ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಪಾಕಿಸ್ಥಾನ ತಂಡವು 20 ರನ್ನುಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ಸಂಭ್ರಮ ಆಚರಿಸಿತು.
ಬಾಬರ್ ಅಜಂ ಅವರ ಸ್ಫೋಟಕ ಆಟದಿಂದಾಗಿ ಪಾಕಿಸ್ಥಾನ 5 ವಿಕೆಟಿಗೆ 197 ರನ್ನುಗಳ ಉತ್ತಮ ಮೊತ್ತ ಪೇರಿಸಿತು. 52 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 86 ರನ್ ಸಿಡಿಸಿದ್ದ ಅಜಂ ಆಬಳಿಕ ಅಹ್ಮದ್ ಶೆಹಜಾದ್ ಜತೆಗೂಡಿ ದ್ವಿತೀಯ ವಿಕೆಟಿಗೆ 122 ರನ್ ಪೇರಿಸಿದ್ದರು.
ಗೆಲ್ಲಲು 198 ರನ್ ಗಳಿಸುವ ಗುರಿ ಪಡೆದ ವಿಶ್ವ ಇಲೆವೆನ್ ತಂಡವು ಪಾಕಿಸ್ಥಾನದ ನಿಖರ ದಾಳಿಗೆ ರನ್ ಗಳಿಸಲು ಒದ್ದಾಡಿ 7 ವಿಕೆಟಿಗೆ 177 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು. ಡ್ಯಾರನ್ ಸಮ್ಮಿ ಮತ್ತು ನಾಯಕ ಫಾ ಡು ಪ್ಲೆಸಿಸ್ ತಲಾ 29 ರನ್ ಹೊಡೆದರು. ಸೊಹೈಲ್ ಖಾನ್, ಶಾದಾಬ್ ಖಾನ್ ಮತ್ತು ರುಮ್ಮಾನ್ ರಯೀಸ್ ತಲಾ ಎರಡು ವಿಕೆಟ್ ಕಿತ್ತರು.
ಈ ಗೆಲುವಿನ ಮೂಲಕ ಪಾಕಿಸ್ಥಾನ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ದ್ವಿತೀಯ ಪಂದ್ಯ ಬುಧವಾರ ಮತ್ತು ಮೂರನೇ ಪಂದ್ಯ ಶುಕ್ರವಾರ ನಡೆಯಲಿದೆ.
ಲಾಹೋರ್‌ನಲ್ಲಿ 2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರಿದ್ದ ಬಸ್‌ನ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ಥಾನ ಅಂತಾರಾಷ್ಟ್ರೀಯ ಪಂದ್ಯವೊಂದರ ಆತಿಥ್ಯ ವಹಿಸಿದ್ದು ಇದು ಎರಡನೇ ಸಲವಾಗಿದೆ.