ಇಸ್ಲಾಮಾಬಾದ್ : ಪಾಕಿಸ್ಥಾನ ಸೇನೆಯ ವಶದಲ್ಲಿರುವ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ನಾಳೆ ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಕಟಿಸಿದ್ದಾರೆ.
ಪಾಕಿಸ್ಥಾನದ ಈ ಪ್ರಕಟನೆಯ ಭಾರತಕ್ಕೆ ದೊರಕಿರುವ ಭಾರೀ ಜಾಗತಿಕ ರಾಜತಾಂತ್ರಿಕ ವಿಜಯವೆಂದು ತಿಳಿಯಲಾಗಿದೆ.
ಪಾಕ್ ಸೇನೆಯ ಕೈಯಲ್ಲಿ ಬಂಧಿಯಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರು ನಾಳೆ ಶುಕ್ರವಾರ ವಾಘಾ ಗಡಿ ಮೂಲಕ ಭಾರತಕ್ಕೆ ಪ್ರವೇಶಿಸುವರೆಂದು ಪಾಕಿಸ್ಥಾನ ಪ್ರಕಟಿಸಿರುವುದಾಗಿ ವರದಿಗಳು ಹೇಳಿವೆ.
ಪಾಕಿಸ್ಥಾನದ ನಿರ್ಗಮನ ರಕ್ಷಣಾ ಅಟಾಶೆ ಅವರು ಅಭಿನಂದನ್ ವರ್ಧಮಾನ್ ಜತೆಗೆ ವಾಘಾ ಗಡಿಯ ವರೆಗೆ ಬಂದು ಅವರನ್ನು ಭಾರತೀಯ ಸೇನೆಯ ವಶಕ್ಕೆ ಒಪ್ಪಿಸಲಿದ್ದಾರೆ ಎಂದು ಪಾಕ್ ಹೇಳಿದೆ.
ಪಾಕ್ ವಾಯು ಪಡೆಯ ಮೂರು ಫೈಟರ್ ಜೆಟ್ ವಿಮಾನ ಗಳು ನಿನ್ನೆ ಬುಧವಾರ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿ ಒಳನುಗ್ಗಿ ಬಂದಾಗ ಅವುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಿಗ್ 21 ಫೈಟರ್ ಜೆಟ್ ವಿಮಾನಗಳ ಪೈಕಿ ಒಂದು ವಿಮಾನದ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ತಮ್ಮ ವಿಮಾನ ಪತನಗೊಂಡಾಗ ಪಿಓಕೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಆಗ ಪಾಕ್ ಸೇನೆ ಅವರನ್ನು ಬಂಧಿಸಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಜಿನೇವಾ ಒಪ್ಪಂದದ ಪ್ರಕಾರ ಪಾಕ್ ಸೇನೆ ಬಂಧಿತ ಅಭಿನಂದನ್ ಅವರಿಗೆ ಯಾವುದೇ ಕಿರುಕುಳ, ಹಿಂಸೆ ಕೊಡದೆ ಗೌರವದಿಂದ ನಡೆಸಿಕೊಂಡು ಭಾರತಕ್ಕೆ ಮರಳಿಸಬೇಕು, ಇಲ್ಲವೇ ಭಾರತದ ಅತ್ಯುಗ್ರ ಪ್ರತಿದಾಳಿಯನ್ನು ಎದುರಿಸಬೇಕಾಗುವುದು ಎಂಬ ಖಡಕ್ ಎಚ್ಚರಿಕೆಯನ್ನು ಭಾರತೀಯ ಸೇನೆ ಪಾಕ್ ಸೇನೆಗೆ ಕೊಟ್ಟಿತ್ತು. ಭಾರತಕ್ಕೆ ಬೆಂಬಲವಾಗಿ ಅಮೆರಿಕ, ರಶ್ಯ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಹತ್ತು ಪ್ರಮುಖ ದೇಶಗಳು ನಿಂತದ್ದೇ ಪಾಕ್ ಮೇಲಿನ ಒತ್ತಡ ಹೆಚ್ಚಲು ಕಾರಣವಾಗಿತ್ತು.