ನವದೆಹಲಿ : ಗಡಿ ರಾಜ್ಯ ಪಂಜಾಬ್‍ನ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಕಿತ್ತಾಟದ ವಿರುದ್ಧ ಅದೇ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಕಿಡಿ ಕಾರಿದ್ದಾರೆ. ಕಾಂಗ್ರೆಸ್‍ನ ಈ ಜಗಳದಿಂದ ಪಾಕಿಸ್ತಾನ ಹಾಗೂ ಐಎಸ್‍ಐ ಗೆ ಲಾಭವಾಗಲಿದೆ ಎಂದು ಸಿಬಲ್ ನುಡಿದಿದ್ದಾರೆ.
ಇಂದು (ಸೆ.29) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಬಲ್, ಗಡಿ ರಾಜ್ಯವಾದ ಪಂಜಾಬ್‍ನಲ್ಲಿ ಈ ರೀತಿಯ ರಾಜಕೀಯ ಅರಾಜಕತೆ ನಡೆಯುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಈ ಕಿತ್ತಾಟವನ್ನು ಪಾಕಿಸ್ತಾನ ಹಾಗೂ ಐಎಸ್‍ಐ ತನ್ನ ಲಾಭಕ್ಕೆ ಬಳಸಿಕೊಳ್ಳಲಿದೆ. ಪಂಜಾಬ್‍ನ ಇತಿಹಾಸ ಹಾಗೂ ಅಲ್ಲಿನ ಉಗ್ರವಾದದ ಬಗ್ಗೆ ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇದನ್ನು ಕಾಂಗ್ರೆಸ್ ಅರ್ಥಮಾಡಿಕೊಂಡು ಒಗ್ಗಟ್ಟಿನಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆಯಿಂದ ಶುರುವಾದ ಒಳಜಗಳ ಬೀದಿಗೆ ಬಂದಿದ್ದು, ಮಂಗಳವಾರ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು, ಅವರ ನಂತರ ಸಚಿವೆ ರಜಿಯಾ ಸುಲ್ತಾನ್ ಸೇರಿದಂತೆ ನಾಲ್ವರು ರಾಜೀನಾಮೆ ನೀಡಿದ್ದಾರೆ.
ಮುಂದಿನ ವರ್ಷ ಪಂಜಾಬ್ ವಿಧಾನಸಭೆಯ ಚುನಾವಣೆ ನಡೆಯಲಿದೆ. ಚುನಾವಣೆಗೆ ಸಿದ್ಧತೆ ನಡೆಸಬೇಕಿದ್ದ ಕಾಂಗ್ರೆಸ್ ಪಕ್ಷದಲ್ಲಿ ಆತಂರಿಕ ಕಲಹ ಏರ್ಪಟ್ಟಿದ್ದು, ಹೈಕಮಾಂಡ್‍ಗೆ ತಲೆ ಬಿಸಿ ಮಾಡಿದೆ. ಇತ್ತ ಕಾಂಗ್ರೆಸ್ ಕಿತ್ತಾಟದ ಲಾಭವ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷವು ಲಾಭ ಪಡೆದುಕೊಳ್ಳುವ ಸಾಧ್ಯತೆ ಇದೆ.