ಲಾಹೋರ್: “ಇಂಡಿಪೆಂಡೆನ್ಸ್ ಕಪ್’ ಸರಣಿಯ ದ್ವಿತೀಯ ಟಿ-20 ಪಂದ್ಯದಲ್ಲಿ ವಿಶ್ವ ಇಲೆವೆನ್ ತಂಡ ಪಾಕಿಸ್ಥಾನದ ಮೇಲೆ ಸೇಡು ತೀರಿಸಿಕೊಂಡಿದೆ. 7 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು ಸಮ ಬಲಕ್ಕೆ ತಂದಿದೆ.
ಲಾಹೋರ್‌ನ “ಗದ್ದಾಫಿ ಸ್ಟೇಡಿಯಂ’ನಲ್ಲಿ ಬುಧವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ಥಾನ 6 ವಿಕೆಟಿಗೆ 176 ರನ್ ಪೇರಿಸಿದರೆ, ವಿಶ್ವ ಇಲೆವೆನ್ ತಂಡ 19.5 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 175 ರನ್ ಬಾರಿಸಿ ವಿಜಯಿ ಯಾಯಿತು. ಮಂಗಳ ವಾರದ ಮೊದಲ ಪಂದ್ಯವನ್ನು ಪಾಕ್ 20 ರನ್ನುಗಳಿಂದ ಗೆದ್ದಿತ್ತು.
ರುಮ್ಮನ್ ರಯೀಸ್ ಪಾಲಾದ ಅಂತಿಮ ಓವರಿನಲ್ಲಿ ವಿಶ್ವ ಇಲೆವೆನ್ ಗೆಲುವಿಗೆ 13 ರನ್ ಅಗತ್ಯವಿತ್ತು. ಹಾಶಿಮ್ ಆಮ್ಲ-ತಿಸರ ಪೆರೆರ ಕ್ರೀಸಿನಲ್ಲಿದ್ದರು. ಮೊದಲ 4 ಎಸೆತಗಳಲ್ಲಿ ಇವರಿಬ್ಬರು ಸೇರಿ 6 ರನ್ ಗಳಿಸಿದರು. 5ನೇ ಎಸೆತವನ್ನು ಪೆರೆರ ಸಿಕ್ಸರ್‌ಗೆ ಅಟ್ಟಿ ತಂಡದ ಗೆಲುವನ್ನು ಸಾರಿದರು.
ವಿಜೇತ ತಂಡದ ಪರ ಆಮ್ಲ ಸರ್ವಾಧಿಕ 72 ರನ್ ಬಾರಿಸಿ ಅಜೇಯರಾಗಿ ಉಳಿದರು (55 ಎಸೆತ, 5 ಬೌಂಡರಿ, 2 ಸಿಕ್ಸರ್). ಪೆರೆರ ಕೇವಲ 19 ಎಸೆತಗಳಿಂದ 47 ರನ್ ಸಿಡಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 5 ಭರ್ಜರಿ ಸಿಕ್ಸರ್ ಒಳಗೊಂಡಿತ್ತು. ಬೌಲಿಂಗಿನಲ್ಲೂ ಮಿಂಚಿದ ಲಂಕಾ ಆಲ್‌ರೌಂಡರ್ 23 ರನ್ ವೆಚ್ಚದಲ್ಲಿ 2 ವಿಕೆಟ್ ಹಾರಿಸಿದ್ದರು. ಆಮ್ಲ-ಪೆರೆರ ಜೋಡಿ 5.5 ಓವರ್‌ಗಳಿಂದ 69 ರನ್ ಪೇರಿಸಿ ತಂಡವನ್ನು ದಡ ಮುಟ್ಟಿಸಿತು. ತಮಿಮ್ ಇಕ್ಬಾಲ್ 23, ನಾಯಕ ಡು ಪ್ಲೆಸಿಸ್ 20, ಪೇಯ್ನ 10 ರನ್ ಮಾಡಿ ಔಟಾದರು.
ಪಾಕಿಸ್ಥಾನ ಪರ ಮತ್ತೆ ಮಿಂಚಿದ ಬಾಬರ್ ಆಜಂ 45 ರನ್ ಹೊಡೆದರು (38 ಎಸೆತ, 5 ಬೌಂಡರಿ). ಅಹ್ಮದ್ ಶೆಹಜಾದ್ 43, ಶೋಯಿಬ್ ಮಲಿಕ್ 39 ರನ್ ಮಾಡಿ ನಿರ್ಗಮಿಸಿದರು. ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ಶುಕ್ರವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-20 ಓವರ್‌ಗಳಲ್ಲಿ 6 ವಿಕೆಟಿಗೆ 174 (ಬಾಬರ್ 45, ಶೆಹಜಾದ್ 43, ಮಲಿಕ್ 39, ಬದ್ರಿ 31ಕ್ಕೆ 2, ಪೆರೆರ 23ಕ್ಕೆ 2).
ವಿಶ್ವ ಇಲೆವೆನ್-19.5 ಓವರ್‌ಗಳಲ್ಲಿ 3 ವಿಕೆಟಿಗೆ 175 (ಆಮ್ಲ ಔಟಾಗದೆ 72, ಪೆರೆರ ಔಟಾಗದೆ 47, ಇಕ್ಬಾಲ್ 23, ನವಾಜ್ 25ಕ್ಕೆ 1, ಇಮಾದ್ 27ಕ್ಕೆ 1).
ಪಂದ್ಯಶ್ರೇಷ್ಠ: ತಿಸರ ಪೆರೆರ.