ಕರಾಚಿ: ನಾಯಕ ಬಾಬರ್ ಆಜಂ ಮತ್ತು ಆರಂಭಕಾರ ಅಬ್ದುಲ್ಲ ಶಫೀಕ್ ಅವರ ಅತ್ಯಂತ ಜವಾಬ್ದಾರಿಯುತ ಆಟದಿಂದ ಕರಾಚಿ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ಹೋರಾಟ ಜಾರಿಯಲ್ಲಿರಿಸಿದೆ.
ಇಬ್ಬರೂ ಆಸ್ಟ್ರೇಲಿಯದ ಗೆಲುವಿನ ಯೋಜನೆಗೆ ಅಡ್ಡಿಯಾಗಿ ನಿಂತಿದ್ದಾರೆ.
ಜಯಕ್ಕೆ 506 ರನ್ನುಗಳ ಕಠಿನ ಗುರಿ ಪಡೆದಿರುವ ಪಾಕಿಸ್ಥಾನ, 4ನೇ ದಿನದಾಟದ ಅಂತ್ಯಕ್ಕೆ 82 ಓವರ್ ನಿಭಾಯಿಸಿ 2 ವಿಕೆಟಿಗೆ 192 ರನ್ ಮಾಡಿದೆ. ಬಾಬರ್ ಆಜಂ 102 ಮತ್ತು ಅಬ್ದುಲ್ಲ ಶಫೀಕ್ 71 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಮಾಮ್ ಉಲ್ ಹಕ್ (1) ಮತ್ತು ಅಜರ್ ಅಲಿ (6) ಅವರನ್ನು ನಥನ್ ಲಿಯೋನ್ ಲೆಗ್ ಬಿಫೋರ್ ಬಲೆಗೆ ಬೀಳಿಸಿದಾಗ ಪಾಕಿಸ್ಥಾನ ಕೇವಲ 21 ರನ್ ಮಾಡಿತ್ತು. ಆಸೀಸ್ ಜಯದ ಯೋಜನೆಗೆ ರೆಕ್ಕೆ ಪುಕ್ಕ ಮೂಡಿತ್ತು.
ಆದರೆ 3ನೇ ವಿಕೆಟಿಗೆ ಜತೆಗೂಡಿದ ಶಫೀಕ್-ಬಾಬರ್ ಬರೋಬ್ಬರಿ 362 ಎಸೆತಗಳನ್ನು ನಿಭಾಯಿಸಿ 171 ರನ್ ಪೇರಿಸಿದ್ದಾರೆ. ಬಾಬರ್ ಅವರ 102 ರನ್ 197 ಎಸೆತಗಳಿಂದ ದಾಖಲಾಗಿದ್ದು, ಇದು ಅವರ 6ನೇ ಟೆಸ್ಟ್ ಶತಕವಾಗಿದೆ (12 ಬೌಂಡರಿ). ಶಫೀಕ್ ಅವರ 71 ರನ್ 226 ಎಸೆತಗಳಿಂದ ಬಂದಿದೆ (4 ಬೌಂಡರಿ, 1 ಸಿಕ್ಸರ್).
ಪಾಕಿಸ್ಥಾನಕ್ಕೆ ಫಾಲೋಆನ್ ರಿಯಾಯಿತಿ ತೋರಿದ ಆಸ್ಟ್ರೇಲಿಯ 2ಕ್ಕೆ 97 ರನ್ ಮಾಡಿ ದ್ವಿತೀಯ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ-9 ವಿಕೆಟಿಗೆ 556 ಡಿಕ್ಲೇರ್ ಮತ್ತು 2 ವಿಕೆಟಿಗೆ 97 ಡಿಕ್ಲೇರ್. ಪಾಕಿಸ್ಥಾನ-148 ಮತ್ತು 2 ವಿಕೆಟಿಗೆ 192.