ಅಮೃತಸರ: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪಾಕಿಸ್ಥಾನಕ್ಕೆ ಭೇಟಿ ನೀಡಿದ ನಂತರ ಅಮೃತಸರದ ಅಟ್ಟಾರಿ-ವಾಘಾ ಗಡಿಗೆ ಬುಧವಾರ ಆಗಮಿಸಿದರು. ಲಾಹೋರ್‌ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಪಂದ್ಯಗಳಿಗೆ ಹಾಜರಾಗಲು ಪಾಕಿಸ್ಥಾನ ಕ್ರಿಕೆಟ್ ಮಂಡಳಿ (PCB) ಏಷ್ಯನ್ ಕ್ರಿಕೆಟ್ ಮಂಡಳಿ (ACC) ಮತ್ತು ಇತರ ಕ್ರಿಕೆಟ್ ಮಂಡಳಿಗಳ ಸದಸ್ಯರಿಗೆ ಆಹ್ವಾನ ನೀಡಿದ ನಂತರ ಬಿನ್ನಿ ಮತ್ತು ಶುಕ್ಲಾ ಪಾಕಿಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದರು.
ಇಬ್ಬರು ಭೋಜನಕೂಟದಲ್ಲಿ ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಮತ್ತು ಶ್ರೀಲಂಕಾ ತಂಡಗಳ ಆಟಗಾರರನ್ನು ಭೇಟಿಯಾದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾ ”ಭೇಟಿ ಉತ್ತಮವಾಗಿತ್ತು, ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಆತಿಥ್ಯವೂ ಉತ್ತಮವಾಗಿತ್ತು. ಭಾರತ ಮತ್ತು ಪಾಕಿಸ್ಥಾನ ನಡುವಿನ ಕ್ರಿಕೆಟ್ ಬಾಂಧವ್ಯವನ್ನು ಪುನರಾರಂಭಿಸಲು ಮಂಡಳಿಯು ಒತ್ತಾಯಿಸಿತ್ತು, ಆದರೆ ಅದನ್ನು ಕೇಂದ್ರ ಸರಕಾರವು ನಿರ್ಧರಿಸುತ್ತದೆ” ಎಂದು ಹೇಳಿದರು.
ಎರಡು ದಿನಗಳ ಭೇಟಿ ಉತ್ತಮವಾಗಿತ್ತು. ನಮ್ಮ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು. ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಆತಿಥ್ಯವೂ ಚೆನ್ನಾಗಿತ್ತು. ಉಭಯ ದೇಶಗಳ ನಡುವಿನ ಕ್ರಿಕೆಟ್ ಅನ್ನು ಪುನರಾರಂಭಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ನಮ್ಮ ಸರ್ಕಾರ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ ಎಂದು ಹೇಳಿದ್ದೇವೆ. ಇದು ಕ್ರಿಕೆಟ್ ಕುರಿತಾಗಿನ ಭೇಟಿ, ಯಾವುದೇ ರಾಜಕೀಯ ಅಜೆಂಡಾ ಇರಲಿಲ್ಲ” ಎಂದರು.
ಬಿನ್ನಿ ಅವರು ಭೇಟಿಯನ್ನು “ಅದ್ಭುತ ಅನುಭವ” ಎಂದು ಬಣ್ಣಿಸಿ,”1984 ರಲ್ಲಿ ನಾವು ಟೆಸ್ಟ್ ಪಂದ್ಯವನ್ನು ಆಡಿದಾಗ ನಮಗೆ ನೀಡಿದ್ದ ಅದೇ ಆತಿಥ್ಯವನ್ನು ನೀಡಲಾಯಿತು. ನಮ್ಮನ್ನು ಅಲ್ಲಿ ರಾಜರಂತೆ ನಡೆಸಿಕೊಳ್ಳಲಾಯಿತು, ಆದ್ದರಿಂದ ಇದು ನಮಗೆ ಅತ್ಯುತ್ತಮ ಸಮಯವಾಗಿತ್ತು. ನಾವು ಎಲ್ಲಾ ಪಾಕಿಸ್ಥಾನದ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಾಯಿತು. ಪಾಕಿಸ್ಥಾನ ಕ್ರಿಕೆಟ್ ಮಂಡಳಿ, ನಾವು ಅಲ್ಲಿಗೆ ಹೋಗಿರುವುದರಿಂದ ಅವರು ತುಂಬಾ ಸಂತೋಷಪಟ್ಟಿದ್ದಾರೆ, ಅದೇ ರೀತಿ ನಾವು ಅಲ್ಲಿಗೆ ಹೋಗಿ ಬಂದಿರುವುದು ನಮಗೂ ತುಂಬಾ ಸಂತೋಷ ತಂದಿದೆ” ಎಂದು ಹೇಳಿದರು.
ಏಷ್ಯಾ ಕಪ್ ನ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ತಂಡ ಸೆಪ್ಟೆಂಬರ್ 10 ರಂದು ಪಾಕಿಸ್ಥಾನವನ್ನು ಎದುರಿಸಲಿದೆ.