ಇಸ್ಲಾಮಾಬಾದ್: ಭಾರತವೂ ಸೇರಿ ವಿಶ್ವಾದ್ಯಂತ ಕೋವಿಡ್ ರೋಗಿಗಳ ಮೇಲೆ, ಶಂಕಿತ ರೋಗಿಗಳ ಮೇಲೆ ಆರೋಗ್ಯ ಕಾರ್ಯಕರ್ತರು, ಆಡಳಿತ ವರ್ಗ ಕಣ್ಣಿಟ್ಟಿದ್ದರೆ, ಪಾಕಿಸ್ಥಾನದಲ್ಲಿ ಇದರ ಕಥೆಯೇ ಬೇರೆ.
ಅಲ್ಲಿ ಕೋವಿಡ್ ರೋಗಿಗಳ ಮೇಲೆ ಕಣ್ಣಿಡುವುದು ಸಾಧ್ಯವಾಗುತ್ತಿಲ್ಲ ಎಂದು ಖುದ್ದು ಗೂಢಚರ ಸಂಸ್ಥೆ ಐಎಸ್‌ಐಯೇ ಕಣ್ಗಾವಲು ಇಟ್ಟಿದೆ.
ಇದಕ್ಕೆ ಸರಕಾರವೇ ಅನುವು ಮಾಡಿಕೊಟ್ಟಿದೆ. ತಂತ್ರಜ್ಞಾನ ಆಧರಿತವಾಗಿ ಇವರನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಅಚ್ಚರಿ ಎಂದರೆ ಈ ತಂತ್ರಜ್ಞಾನವನ್ನು ಉಗ್ರರರನ್ನು ಪತ್ತೆ ಹಚ್ಚಲು, ಅವರು ಎಲ್ಲೆಲ್ಲಿ ಸಂಚರಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಬಳಸಲಾಗುತ್ತದಂತೆ. ಆದರೆ ಯಾವ ರೀತಿಯ ತಂತ್ರಜ್ಞಾನ ಬಳಸಲಾಗುತ್ತದೆ ಎಂಬುದನ್ನು ಹೇಳಿಲ್ಲ. ಈ ವಿಚಾರವನ್ನು ಐಎಸ್‌ಐ ಅಧಿಕಾರಿಗಳೇ ಲೀಕ್ ಮಾಡಿದ್ದಾರೆ.
ಕೋವಿಡ್ ರೋಗಿಗಳನ್ನು ಟ್ರ್ಯಾಕ್ ಮಾಡಲು ಜಿಯೋ ಫೆನ್ಸಿಂಗ್ ಮತ್ತು ಫೋನ್ ಮಾನಿಟರಿಂಗ್ ವ್ಯವಸ್ಥೆಯನ್ನು ಅವರು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ತಜ್ಞರು ಊಹಿಸುತ್ತಾರೆ. ಇದರಿಂದ ಅವರು ಒಂದು ನಿರ್ದಿಷ್ಟ ಪ್ರದೇಶ ದಾಟಿ ಹೋದ ಕೂಡಲೇ ಗುರುತಿಸಬಹುದು. ಈ ವಿಚಾರವನ್ನು ಬಳಿಕ ಆಡಳಿತಕ್ಕೆ ತಿಳಿಸುವ ಕೆಲಸವನ್ನು ಐಎಸ್‌ಐ ಮಾಡುತ್ತಿದೆ.
ಈ ವಿಧಾನ ಅಲ್ಲಿನ ಆಡಳಿತಕ್ಕೆ ಅತಿ ಪ್ರಯೋಜನಕಾರಿಯೂ ಆಗಿದೆಯಂತೆ. ಅಲ್ಲಿ ಕೋವಿಡ್ ಬಂದಿದೆ ಎಂದು ಗೊತ್ತಿದ್ದರೂ, ತಪ್ಪಿಸಿಕೊಳ್ಳುವವರು, ಚಿಕಿತ್ಸೆಗೆ ಹಾಜರಾಗದವರು, ಆಸ್ಪತ್ರೆ/ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳುವವರು ಹೆಚ್ಚಿದ್ದಾರಂತೆ. ಆದ್ದರಿಂದ ಐಎಸ್‌ಐ ಮೂಲಕ ಅವರ ಮೇಲೆ ಹೇಗೆ ಬೇಕಾದರೂ ಕಣ್ಣಿಡಬಹುದು ಎಂದು ಸರಕಾರ ಭಾವಿಸಿದೆ. ಐಎಸ್‌ಐ ಅಧಿಕಾರಿಗಳು ಸ್ಥಳೀಯ ಮತ್ತು ಪ್ರಾಂತ್ಯದ ಸರಕಾರದ ಮುಖ್ಯಸ್ಥರೊಂದಿಗೆ ನೇರ ಸಂಪರ್ಕದಲ್ಲಿದ್ದು ಕೊರೊನಾ ರೋಗಿಗಳ ಮಾಹಿತಿಗಳನ್ನು ನೋಡುತ್ತಿದ್ದಾರೆ. ಇಡೀ ದೇಶದಲ್ಲಿ ಕೋವಿಡ್ ಸೋಂಕನ್ನು ತಡೆಯಲು ಸರಕಾರ ಇನ್ನಿಲ್ಲದ ಯತ್ನ ಮಾಡುತ್ತಿದ್ದು ಏತನ್ಮಧ್ಯೆ ತಪ್ಪಿಸಿಕೊಂಡು ತಿರುಗಾಡುತ್ತಿರುವವರು ಇನ್ನಷ್ಟು ತಲೆನೋವು ತರುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದು ಸವಾಲಾದ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಐಎಸ್‌ಐಗೆ ಹೊಣೆ ವಹಿಸಿದ್ದಾರೆ ಎನ್ನಲಾಗಿದೆ.
ಇದರೊಂದಿಗೆ ಲಾಕ್‌ಡೌನ್ ಉಲ್ಲಂಘನೆ ವಿಚಾರದಲ್ಲಿ ಅಲ್ಲಿನ ಸೇನೆ ಇನ್ನಷ್ಟು ಕಠಿನ ನಿಲುವು ತಾಳುತ್ತಿದ್ದು, ಜನರ ವಿರುದ್ಧ ಬಿಗು ಕ್ರಮ ಕೈಗೊಳ್ಳುತ್ತಿದೆ ಎನ್ನಲಾಗಿದೆ.