ವಾಷಿಂಗ್ಟನ್: ಪ್ರತ್ಯೇಕ ಖಲಿಸ್ಥಾನ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಸಂಘಟನೆಯಾಗಿರುವ ಸಿಖ್ ಫಾರ್ ಜಸ್ಟೀಸ್ (SFJ) ಗಣರಾಜ್ಯೋತ್ಸವ ದಿನದಂದು ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರಿ ಕಛೇರಿಯ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆ ಜನಬೆಂಬಲವಿಲ್ಲದೆ ವಿಫಲವಾದ ಮಾಹಿತಿ ಇದೀಗ ಹೊರಬಿದ್ದಿದೆ.
ಗಣರಾಜ್ಯೋತ್ಸವ ದಿನದಂದು ಸಿಖ್ ಫಾರ್ ಜಸ್ಟೀಸ್ (SFJ) ಸಂಘಟನೆಯು ಭಾರತ ವಿರೋಧಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಮತ್ತು ಇದೇ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಸುಡುವ ಯೋಚನೆಯನ್ನೂ ಸಂಘಟನೆಯ ಸದಸ್ಯರು ಮಾಡಿಕೊಂಡಿದ್ದರು. ಆದರೆ ಪ್ರತಿಭಟನೆಯ ದಿನ SFJ ಪರವಾಗಿ 15 ರಿಂದ 20 ಸದಸ್ಯರು ಮಾತ್ರವೇ ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಭಾರತ ಪರ ಜಾಥಾವೊಂದನ್ನು ಅನಿವಾಸಿ ಭಾರತೀಯ ದೇಶಪ್ರೇಮಿಗಳು ಆಯೋಜಿಸಿದ್ದರು. ಭಾರತ ಪರ ಘೋಷಣೆಗಳನ್ನು ಕೂಗುತ್ತಾ, ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಈ ಗುಂಪು ರಾಯಭಾರಿ ಕಛೇರಿಯ ಎದುರು SFJಗೆ ಭರ್ಜರಿ ಶಾಕ್ ನೀಡಿತು.
ಭಾರತ ವಿರೋಧಿ ಪ್ರತಿಭಟನಾಕಾರರಲ್ಲಿ ಪಾಕ್ ಪ್ರಜೆಗಳು!
ಪ್ರತ್ಯಕ್ಷದರ್ಶಿಗಳು ಹೇಳುವಂತೆ ಸಿಖ್ ಫಾರ್ ಜಸ್ಟೀಸ್ (SFJ) ಸಂಘಟನೆ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಪಾಕಿಸ್ಥಾನೀಯರೇ ಇದ್ದರು, ಇದರಿಂದಾಗಿ ಈ ಪ್ರತಿಭಟನೆಯ ಆಯೋಜನೆಯ ಹಿಂದೆ ಪಾಕಿಸ್ಥಾನದ ಕೈವಾಡ ಇರುವ ಕುರಿತಾಗಿ ಇದೀಗ ಶಂಕೆ ವ್ಯಕ್ತವಾಗಿದೆ. ತಮ್ಮ ಪ್ರತಿಭಟನೆ ಯಶಸ್ವಿಯಾಗದಿದ್ದರೂ SFJ ತನ್ನ ಅಧೀಕೃತ ವೆಬ್ ಸೈಟ್ ನಲ್ಲಿ ಪ್ರತಿಭಟನೆ ಯಶಸ್ವಿಯಾಗಿರುವುದಾಗಿ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಇದೇ ವೇಳೆ @sikhsforjustice, @SFJ_Lawyer ಟ್ವಟರ್ ಅಕೌಂಟ್ ಗಳ ಮೇಲೆ ಕಾನೂನು ಕ್ರಮ ಕೈಗೊಂಡು ಅವುಗಳನ್ನು ರದ್ದುಗೊಳಿಸಲಾಗಿದೆ.
ಅನಿವಾಸಿ ಸಿಖ್ ಸಮುದಾಯ ಖಂಡನೆ
SFJ ಆಯೋಜಿಸಿದ್ದ ಭಾರತ ವಿರೋಧಿ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜ ಸುಡುವ ಯೋಚನೆಗೆ ಅಮೆರಿಕಾದಲ್ಲಿರುವ ಸಿಖ್ ಸಮುದಾಯದ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ‘ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಯಾವುದೇ ಭಾಗದಲ್ಲಿರುವ ಶಾಂತಿಪ್ರಿಯ ಸಿಖ್ ಸಮುದಾಯವು ಧ್ವಜ ಸುಡುವಂತಹ ಮಾದರಿಯ ಪ್ರತಿಭಟನೆಯನ್ನು ಯಾವತ್ತೂ ಬೆಂಬಲಿಸುವುದಿಲ್ಲ…’ ಎಂದು ಅಮೆರಿಕಾ ಸಿಖ್ ಸಂಘಟನೆ ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
Related Articles
ಅಮೆರಿಕಾಕ್ಕೆ ಭಾರತದ ನೂತನ ರಾಯಭಾರಿಯಾಗಿ ನೇಮಕಗೊಂಡಿರುವ ಹರ್ಷ ಶ್ರಿಂಗ್ಲಾ ಅವರು ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಗಣರಾಜ್ಯೋತ್ಸವ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಹಾಜರಿದ್ದರು.