ಹೊಸದಿಲ್ಲಿ: ಪಾಕಿಸ್ಥಾನ ಗಡಿಯಾಚೆ ನಡೆಸುತ್ತಿರುವ ಉಗ್ರ ಚಟುವಟಿಕೆಗಳ ಮೇಲೆ ಭಾರತೀಯ ವಾಯು ಪಡೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆ ಬಳಿ ಕಂಡುಬರುವ ಉಗ್ರಗಾಮಿಗಳ ಶಿಬಿರ ಅಥವಾ ಯಾವುದೇ ಲಾಂಚ್‌ಪ್ಯಾಡ್‌ಗಳನ್ನು ಧ್ವಂಸಗೊಳಿಸಲು ಐಎಎಫ್ ಸಿದ್ಧವಿದೆ ಎಂದು ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ನೆಲದಲ್ಲಿ ಭಯೋತ್ಪಾದಕ ದಾಳಿ ನಡೆದಾಗಲೆಲ್ಲಾ ಪಾಕಿಸ್ತಾನಕ್ಕೆ ಚಿಂತೆಯಾಗುವಂತೆ ನಾವು ಮಾಡಿದ್ದೇವೆ ಮತ್ತು ಈ ಚಿಂತೆ ಮುಂಬರುವ ದಿನಗಳಲ್ಲೂ ಆ ದೇಶಕ್ಕಿರಬೇಕು.
ಮತ್ತು ಭವಿಷ್ಯದಲ್ಲಿ ಈ ರೀತಿಯ ಚಿಂತೆ ಕಡಿಮೆಯಾಗಬೇಕಾದರೆ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವುದನ್ನು ಬಿಡುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರದ ನಿರ್ದೇಶನಗಳಿಗನುಗುಣವಾಗಿ ಯಾವುದೇ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ನಮ್ಮ ವಾಯುಪಡೆ ಸಶಕ್ತವಾಗಿದೆ ಎಂದು ಭದೌರಿಯಾ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು. ದೇಶಕ್ಕಾಗಿ ವಾಯುಪಡೆಯ ಸೇವೆ 24×7 ಲಭ್ಯವಿರುತ್ತದೆ ಈ ಕುರಿತಾಗಿ ಯಾರಿಗೂ ಸಂಶಯ ಬೇಡ ಎಂಬುದು ವಾಯುಪಡೆಯ ಮುಖ್ಯಸ್ಥರ ಖಚಿತ ಧ್ವನಿಯಾಗಿದೆ.
ಭಾರತೀಯ ವಾಯುಪಡೆ ನಡೆಸಿದ ಬಾಲಾಕೋಟ್ ವಾಯು ದಾಳಿಯ ಮೂಲಕ ನಾವು ಪಾಕಿಸ್ಥಾನಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದೇವೆ ಹಾಗೂ ಗಡಿಯಾಚೆಗಿನ ಮೂಲಭೂತ ಸೌಕರ್ಯಗಳನ್ನು ಉಗ್ರ ಪೋಷಣೆಗೆ ಬಳಸಿಕೊಂಡಲ್ಲಿ ಇದೇ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಹೇಳಿರುವುದುನ್ನು ಇಲ್ಲಿ ಗಮನಿಸಬಹುದಾಗಿದೆ.