Advertisement

ಪಾಕಿಸ್ಥಾನ ಪ್ರವಾಸಕ್ಕೆ ವಿಂಡೀಸ್‌ ತಂಡ

06:00 AM Mar 31, 2018 | Team Udayavani |

ಜಮೈಕಾ: ಇನ್ನೆರಡು ದಿನಗಳಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ20 ಸರಣಿಯಲ್ಲಿ ಪಾಲ್ಗೊಳ್ಳುವ 13 ಸದಸ್ಯರ ವಿಂಡೀಸ್‌ ತಂಡವನ್ನು ಪ್ರಕಟಿಸಲಾಗಿದೆ. ಜಾಸನ್‌ ಮೊಹಮ್ಮದ್‌ ತಂಡವನ್ನು ಮುನ್ನಡೆಸಲಿದ್ದಾರೆ. 

Advertisement

ವೆಸ್ಟ್‌ಇಂಡೀಸ್‌ ಪ್ರವಾಸಗೈಯುವ ಕುರಿತು ಭಾರೀ ಕಳವಳವಿದೆಯಾದರೂ ಇದೀಗ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರಕಟಿಸಿದ್ದರಿಂದ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ. ಕರಾಚಿಯ ನ್ಯಾಶನಲ್‌ ಕ್ರೀಡಾಂಗಣದಲ್ಲಿ ಎಪ್ರಿಲ್‌ 1, 2 ಮತ್ತು 3ರಂದು ಪಂದ್ಯಗಳು ನಡೆಯಲಿದ್ದು ಟಿಕೆಟ್‌ ಮಾರಾಟ ಈಗಾಗಲೇ ಆರಂಭವಾಗಿದೆ.

ಶ್ರೀಲಂಕಾದಂತೆ ವೆಸ್ಟ್‌ಇಂಡೀಸ್‌ ತಂಡ ಪರಿಪೂರ್ಣ ತಂಡವನ್ನು ಪಾಕಿಸ್ಥಾನಕ್ಕೆ ಕಳುಹಿಸುತ್ತಿಲ್ಲ. ವಿಶ್ವಕಪ್‌ ಅರ್ಹತಾ ಕೂಟದಲ್ಲಿ ಆಡಿದ ತಂಡದಲ್ಲಿದ್ದ ನಾಲ್ವರು ಮಾತ್ರ ಈ ತಂಡದಲ್ಲಿದ್ದಾರೆ. ನಾಯಕ ಜಾಸನ್‌ ಹೋಲ್ಡರ್‌, ಕ್ರಿಸ್‌ ಗೇಲ್‌, ದೇವೇಂದ್ರ ಬಿಶೂ ತಂಡದಲ್ಲಿಲ್ಲ. ಅನನುಭವಿ ತಂಡವೆಂದು ಭಾವಿಸಲಾದ ಈ ತಂಡದಲ್ಲಿ ಇಬ್ಬರು ಹೊಸಮುಖಗಳಿದ್ದಾರೆ. ಆಂದ್ರೆ ಮೆಕಾರ್ಥಿ ಮತ್ತು ಒಡಿಯನ್‌ ಸ್ಮಿತ್‌ ಚೊಚ್ಚಲ ಬಾರಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಬಾರ್ಬಡೋಸ್‌ನ ಯಾವುದೇ ಆಟಗಾರ ತಂಡಕ್ಕೆ ಆಯ್ಕೆಯಾಗದಿರುವುದು ಆಶ್ಚರ್ಯ ತಂದಿದೆ. ಹಿಂದೆ ವಿಂಡೀಸ್‌ ತಂಡದಲ್ಲಿ ಬಾರ್ಬಡೋಸ್‌ನ ಒಬ್ಬರಾದರೂ ಸ್ಥಾನ ಪಡೆಯುತ್ತಿದ್ದರು. ಬಾರ್ಬಡೋಸ್‌ನ ನಾಯಕ ಹೋಲ್ಡರ್‌ ಸಹಿತ ಶೈ ಹೋಪ್‌, ಕಾರ್ಲೋಸ್‌ ಬ್ರಾತ್‌ವೇಟ್‌ ಮತ್ತು ಆ್ಯಶೆ ನರ್ಸ್‌ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಮಾರ್ಲಾನ್‌ ಸಾಮ್ಯುಯೆಲ್ಸ್‌, ದಿನೇಶ್‌ ರಾಮದಿನ್‌ ಮತ್ತು ಸಾಮ್ಯುಯೆಲ್‌ ಬದ್ರಿ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ. ಚಾದ್ವಿಕ್‌ ವಾಲ್ಟನ್‌ ಮತ್ತು ಆರಂಭಿಕ ಆಂದ್ರೆ ಫ್ಲೆಚರ್‌ ಕೂಡ ತಂಡದಲ್ಲಿದ್ದಾರೆ. ಅವರಿಬ್ಬರು ಕಳೆದ ರವಿವಾರ ಕರಾಚಿಯಲ್ಲಿ ನಡೆದ ಪಾಕಿಸ್ಥಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ನ ಫೈನಲ್‌ನಲ್ಲಿ ಆಡಿದ್ದರು.
ಕರಾಚಿಯಲ್ಲಿ ಪಿಎಸ್‌ಎಲ್‌ ಅನ್ನು ಯಶಸ್ವಿಯಾಗಿ ಸಂಘಟಿಸಿದ್ದರಿಂದ ನಮ್ಮ ತಂಡವು ಮೂರು ಪಂದ್ಯಗಳ ಟ್ವೆಂಟಿ20 ಸರಣಿಯಲ್ಲಿ ಆಡಲು ಪಾಕಿಸ್ಥಾನಕ್ಕೆ ತೆರಳುತ್ತಿದೆ. ಪಾಕಿಸ್ಥಾನ ಕ್ರಿಕೆಟ್‌ ಮಂಡಳಿಯಲ್ಲಿರುವ ನಮ್ಮ ಸ್ನೇಹಿತರಿಗೆ ತವರಿನಲ್ಲಿ ಕ್ರಿಕೆಟ್‌ ಆಟವನ್ನು ಇನ್ನಷ್ಟು ಹೆಚ್ಚು ಸಂಘಟಿಸಲು ಈ ಪ್ರವಾಸ ಪ್ರಮುಖ ಹೆಜ್ಜೆಯಾಗಲಿದೆ. ಇದನ್ನು ನಮ್ಮ ಆಟಗಾರರು ಮತ್ತು ಬೆಂಬಲ ಸಿಬಂದಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಈ ಸಾಹಸಕ್ಕೆ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ನಾವು ಸಂತೋಪಪಡುತ್ತೇವೆ ಎಂದು ಕ್ರಿಕೆಟ್‌ ವೆಸ್ಟ್‌ಇಂಡೀಸ್‌ (ಸಿಡಬ್ಲ್ಯುಐ)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನಿ ಗ್ರೇವ್‌ ಹೇಳಿದ್ದಾರೆ. 

Advertisement

ವೆಸ್ಟ್‌ಇಂಡೀಸ್‌ ತಂಡ: ಜಾಸನ್‌ ಮೊಹಮ್ಮದ್‌ (ನಾಯಕ), ಸಾಮ್ಯುಯೆಲ್‌ ಬದ್ರಿ, ರಯದ್‌ ಎಮ್ರಿಟ್‌, ಆಂದ್ರೆ ಫ್ಲೆಚರ್‌, ಆಂದ್ರೆ ಮೆಕಾರ್ಥಿ, ಕೀಮೊ ಪಾಲ್‌, ವೀರಸ್ವಾಮಿ ಪೆರುಮಾಳ್‌, ರೊಮ್ಯಾನ್‌ ಪೊವೆಲ್‌, ದಿನೇಶ್‌ ರಾಮದಿನ್‌, ಮಾರ್ಲಾನ್‌ ಸಾಮ್ಯುಯೆಲ್ಸ್‌, ಒಡಿಯನ್‌ ಸ್ಮಿತ್‌, ಚಾದ್ವಿಕ್‌ ವಾಲ್ಟನ್‌, ಕೆಸ್ರಿಕ್‌ ವಿಲಿಯಮ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next