ಇಸ್ಲಾಮಾಬಾದ್/ನವದೆಹಲಿ: ಭದ್ರತೆಯ ನೆಪದಲ್ಲಿ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಪತ್ನಿಯ ಕುಂಕುಮ, ಮಂಗಳಸೂತ್ರ ತೆಗೆಸಿದ ಪಾಕಿಸ್ತಾನ ಸರ್ಕಾರ ಮತ್ತೂಂದು ಹೊಣೆಗೇಡಿತನ ಪ್ರದರ್ಶಿಸಿದೆ. ಇದೀಗ ಜಾಧವ್‌ರ ಪತ್ನಿಯ ಚಪ್ಪಲಿಯಲ್ಲಿ ಲೋಹದ ಅಂಶವಿದೆ ಎಂದು ಅನುಮಾನಿಸಿ ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದೆ. ಪಾಕಿಸ್ತಾನ ವಿದೇಶಾಂಗ ಇಲಾಖೆ ಸಚಿವಾಲಯದ ವಕ್ತಾರರೇ ಅದನ್ನು ಹೇಳಿದ್ದಾಗಿ “ಪಾಕಿಸ್ತಾನ ಟುಡೇ’ ಎಂಬ ಪತ್ರಿಕೆ ವರದಿ ಮಾಡಿದೆ.
ಇದೇ ವಿಚಾರದ ಬಗ್ಗೆ “ದ ಡಾನ್’ ಕೂಡ ವರದಿ ಪ್ರಕಟಿಸಿದೆ. ಅದರ ಪ್ರಕಾರ “ಜಾಧವ್ ಪತ್ನಿಯ ಚಪ್ಪಲಿ ಯಲ್ಲಿ ಇದ್ದ ಲೋಹದ ಅಂಶ ಚಿಪ್ ಅಥವಾ ಕ್ಯಾಮೆರಾವೋ ಎಂಬುದು ಪತ್ತೆಯಾಗಬೇಕಿದೆ. ಅದಕ್ಕಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆ ಶೂಗಳ ಬದಲಿಗೆ ಜಾಧವ್ ಪತ್ನಿಗೆ ಬೇರೆ ಜತೆ ಚಪ್ಪಲಿ ಧರಿಸಲು ನೀಡಲಾಗಿತ್ತು. ಭೇಟಿ ವೇಳೆ ಚಿನ್ನಾಭರಣಗಳನ್ನು ತೆಗೆದು ಇರಿಸುವಂತೆ ಸೂಚಿಸಲಾಗಿತ್ತು. ಬಳಿಕ ಅವುಗಳನ್ನು ಅವರಿಗೆ ಹಿಂತಿರುಗಿಸಲಾಗಿದೆ. ಈ ಬಗ್ಗೆ ಮಂಗಳವಾರ ರಾತ್ರಿಯೇ ವಿದೇಶಾಂಗ ಇಲಾಖೆ ವಕ್ತಾರ ಮಾಹಿತಿ ನೀಡಿದ್ದಾರೆ’ ಎಂದು ಅದರಲ್ಲಿ ಹೇಳಿಕೊಳ್ಳಲಾಗಿದೆ.
ಇಂದು ಹೇಳಿಕೆ: ಹಲವು ವಿವಾದದ ಮುಖಗಳನ್ನು ಕಂಡಿರುವ ಬೆಳವಣಿಗೆ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಲೋಕಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ. ಬುಧವಾರ ಸದನ ಸಮಾವೇಶಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಬೆಳವಣಿಗೆ ಬಗ್ಗೆ ಆಕ್ಷೇಪವೆತ್ತಿದ್ದರಿಂದ ಅವರು ಸ್ಪಷ್ಟನೆ ನೀಡಲಿದ್ದಾರೆ.
ಭಾರತದ ಆರೋಪ ತಿರಸ್ಕಾರಮತ್ತೂಂದೆಡೆ, ಜಾಧವ್ ಪತ್ನಿ, ತಾಯಿಗೆ ಅವಮಾನ ಮಾಡಲಾಗಿದೆ ಎಂಬ ಭಾರತದ ವಿದೇಶಾಂಗ ಇಲಾಖೆ ಆರೋಪವನ್ನು ಪಾಕಿಸ್ತಾನ ತಿರಸ್ಕರಿಸಿದೆ. ಪತ್ನಿಯ ಚಪ್ಪಲಿಯಲ್ಲಿ ಸಂಶಯಾ ಸ್ಪದ ಅಂಶ ಪತ್ತೆಯಾಗಿದ್ದರಿಂದ ಅದನ್ನು ವಶಪಡಿಸಿಕೊಳ್ಳಲಾಯಿತು ಎಂಬ ಅಂಶವನ್ನು ಒಪ್ಪಿಕೊಂಡಿದೆ. “ಪಾಕಿಸ್ತಾನ ಸರ್ಕಾರ ಅರ್ಥಹೀನ ವಾಗ್ಯುದ್ಧದಲ್ಲಿ ಭಾಗವಹಿಸಲು ಇಚ್ಛಿಸುತ್ತಿಲ್ಲ. ಭಾರತ ಸರ್ಕಾರ ಮಾಡಿರುವ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸು ತ್ತೇವೆ. ಅವರಿಗೆ ಅಂಥ ಸಂಶಯಗಳಿದ್ದಲ್ಲಿ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಡೆಪ್ಯುಟಿ ಹೈಕಮಿಷನರ್ ಈ ಬಗ್ಗೆ ಡಿ.25ರಂದೇ ಆಕ್ಷೇಪಿಸಬಹುದಿತ್ತಲ್ಲವೇ?’ ಎಂದು ಪ್ರಶ್ನಿಸಿದೆ.