ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್–ಇ–ಇನ್ಸಾಫ್ (ಪಿಟಿಐ) ನಾಯಕರ ಮೇಲೆ ಪೊಲೀಸ್ ದಬ್ಬಾಳಿಕೆ ಮುಂದುವರೆದಿದ್ದು, ಪಕ್ಷದ ಹಿರಿಯ ಉಪಾಧ್ಯಕ್ಷೆ ಡಾ. ಶಿರೀನ್ ಮಜಾರಿ ಅವರನ್ನು ಇಸ್ಲಾಮಾಬಾದ್ ಪೊಲೀಸರು ಶುಕ್ರವಾರ ಮುಂಜಾನೆ ಫೆಡರಲ್ ರಾಜಧಾನಿಯ ಅವರ ನಿವಾಸದಿಂದ ಬಂಧಿಸಿದ್ದಾರೆ ಎಂದು ದಿ ನ್ಯೂಸ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ.
ಇಮ್ರಾನ್ ಖಾನ್, ಅಸದ್ ಉಮರ್, ಫವಾದ್ ಚೌಧರಿ, ಶಾ ಮೆಹಮೂದ್ ಖುರೇಷಿ, ಅಲಿ ಮೊಹಮ್ಮದ್ ಖಾನ್ ಮತ್ತು ಸೆನೆಟರ್ ಎಜಾಜ್ ಚೌಧರಿ ಸೇರಿದಂತೆ ಅನೇಕ ಪಿಟಿಐ ನಾಯಕರ ಸರಣಿ ಬಂಧನದ ನಂತರ ಶಿರೀನ್ ಮಜಾರಿ ಬಂಧನವಾಗಿದೆ.
ಅಸಾದ್ ಉಮರ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ನಿಂದ ಬಂಧಿಸಲಾಗಿದೆ. ಫವಾದ್ ಚೌಧರಿ ಅವರನ್ನು ಸುಪ್ರೀಂ ಕೋರ್ಟ್ ಆವರಣದಿಂದ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಶಾ ಮೆಹಮೂದ್ ಖುರೇಷಿಯನ್ನು ಇಸ್ಲಾಮಾಬಾದ್‌ನ ಗಿಲ್ಗಿಟ್ ಬಾಲ್ಟಿಸ್ತಾನ್ ಹೌಸ್‌ನಿಂದ ಬಂಧಿಸಲಾಗಿದೆ ಎಂದು ವರದಿ ಮಾಡಿದೆ.
ಅಲ್ ಖಾದಿರ್ ಟ್ರಸ್ಟ್ ಅಕ್ರಮದಲ್ಲಿ ಬಂಧಿತರಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಅವರನ್ನು ತತ್‌ಕ್ಷಣವೇ ತನ್ನ ಎದುರು ಹಾಜರುಪಡಿಸಬೇಕು ಎಂದು ನ್ಯಾಯಪೀಠ ಸರಕಾರಕ್ಕೆ ಆದೇಶ ನೀಡಿತ್ತು. ಅದರ ಅನ್ವಯ ಪಾಕ್ ಸರಕಾರ ಅವರನ್ನು ಕೋರ್ಟ್ ಗೆ ಹಾಜರುಪಡಿಸಿತು. ಬಿಗಿ ಬಂದೋಬಸ್ತ್ ನಲ್ಲಿ ಅವರನ್ನು ಕೋರ್ಟ್ ಹಾಲ್‌ಗೆ ಕರೆದುಕೊಂಡು ಬಂದ ತತ್‌ಕ್ಷಣ ಬಾಗಿಲು ಮುಚ್ಚಿ ವಿಚಾರಣೆ ನಡೆಸಲಾಯಿತು. ಖಾನ್ ಬಿಡುಗಡೆ ಆದೇಶ ಪ್ರಕಟವಾಗುತ್ತಿದ್ದಂತೆಯೇ ದೇಶಾದ್ಯಂತ ಅವರ ಪಕ್ಷದ ಕಾರ್ಯಕರ್ತರು ಸಂಭ್ರ ಮಾಚರಣೆ ನಡೆಸಿದ್ದಾರೆ.