ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅಲ್ಲಿನ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯನ್ನು ಮಾ. 25ಕ್ಕೆ ನಿಗದಿಗೊಳಿಸಲಾಗಿದೆ.
ಪಾಕಿಸ್ತಾನ ಸಂಸತ್ತಿನ ಕೆಳಮನೆಯ ಸ್ಪೀಕರ್ ಅಸಾದ್ ಕೈಸರ್ ಈ ವಿಷಯ ಪ್ರಕಟಿಸಿದ್ದಾರೆ. ಮಾ.8ರಂದು, ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಪಕ್ಷಗಳಿಗೆ ಸೇರಿದ ಸುಮಾರು 100 ಸಂಸದರು ಒಟ್ಟಾಗಿ ಅಲ್ಲಿನ ಸಂಸತ್ತಿನ ಕೆಳಮನೆಯ ಕಾರ್ಯದರ್ಶಿಯವರಿಗೆ ಅವಿಶ್ವಾಸ ಗೊತ್ತುವಳಿಯನ್ನು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ, ಭಾನುವಾರ ಪಾಕಿಸ್ತಾನ ಸಂಸತ್ತಿನ ಕೆಳಮನೆಯ ಸ್ಪೀಕರ್ ಹಾಗೂ ಕಾರ್ಯದರ್ಶಿಯವರ ಕಚೇರಿಯಿಂದ ಅಧಿಸೂಚನೆಯೊಂದು ಹೊರಬಿದ್ದಿದ್ದು, ಅದರಲ್ಲಿ ಕೆಳಮನೆಯ ವಿಶೇಷ ಕಲಾಪವನ್ನು ಮಾ. 22ರ ಬೆಳಗ್ಗೆ 11ರಿಂದ ಆರಂಭಿಸಲಾಗುತ್ತದೆ. ಮಾ. 25ರಂದು ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆ ಇರಲಿದೆ.
ಒಐಸಿಗೆ ತೊಂದರೆ ಮಾಡಬೇಡಿ: ಸಚಿವರ ಎಚ್ಚರಿಕೆ
ಮಾ. 22-23ರಂದು ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗಿರುವ ಇಸ್ಲಾಮಿಕ್ ಸಹಕಾರ ಸಂಸ್ಥೆಯ (ಒಐಸಿ) ಸಮ್ಮೇಳನಕ್ಕೆ ಯಾವುದೇ ತೊಂದರೆ ಕೊಡಬಾರದೆಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಶೀದ್ ಅವರು ವಿಪಕ್ಷಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ದೇಶದ ಸದ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ವಿಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಚರ್ಚೆ ನಡೆಸಬೇಕು, ಇಲ್ಲವಾದರೆ ಒಐಸಿ ಸಮ್ಮೇಳನ ಸ್ಥಳದ ಮುಂದೆ ಧರಣಿ ನಡೆಸುವುದಾಗಿ ವಿಪಕ್ಷಗಳು ಸರ್ಕಾರವನ್ನು ಎಚ್ಚರಿಸಿದ್ದವು. ಈ ಹಿನ್ನೆಲೆಯಲ್ಲಿ ಸಚಿವ ಎಚ್ಚರಿಕೆ ಹೊರಬಿದ್ದಿದೆ. ಈ ನಡುವೆ, ಒಐಸಿ ಸಮ್ಮೇಳನದ ಭದ್ರತೆಗಾಗಿ 15,000 ಭದ್ರತಾ ಸಿಬ್ಬಂದಿ ಹಾಗೂ ಪಾಕಿಸ್ತಾನ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.