Advertisement

ಜಾಧವ್‌ ಹೆಸರಲ್ಲಿ  ಪಾಕ್‌ ನಾಟಕ: ಭೇಟಿ ಅವಕಾಶದಲ್ಲೂ ಕುತಂತ್ರ

06:00 AM Dec 26, 2017 | Team Udayavani |

ಇಸ್ಲಾಮಾಬಾದ್‌: ಭಾರತದ ಪರ ಗೂಢಚಾರಿಕೆ ನಡೆಸುತ್ತಿದ್ದ ಎಂದು ಆರೋಪಿಸಿ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಿರುವ ಪಾಕ್‌ 21 ತಿಂಗಳ ಅನಂತರ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟದ್ದನ್ನೇ ತನ್ನ ಉದಾರ ನಡೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನ ನಡೆಸಿದೆ.

Advertisement

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕ್‌ ಕೊನೆಗೂ ಜೈಲಿನಲ್ಲಿರುವ ಕುಲಭೂಷಣ್‌ ಜಾಧವ್‌ರನ್ನು ಭೇಟಿ ಮಾಡಲು ಅವರ ತಾಯಿ ಅವಂತಿ ಹಾಗೂ ಪತ್ನಿ ಚೇತನ್‌ಕುಲ್‌ಗೆ ಅವಕಾಶ ನೀಡಿದ್ದರಿಂದ ಸೋಮವಾರ ಮುಖಾಮುಖೀಯಾದರು.

ಆದರೆ ಭಾರತದಿಂದ ಇಸ್ಲಾಮಾಬಾದ್‌ಗೆ ಭೇಟಿಗಾಗಿ ತಾಯಿ, ಪತ್ನಿ ತೆರಳಿದ್ದರೂ ಆತ್ಮೀಯ ಭೇಟಿಗೆ ಅವಕಾಶ ಮಾಡಿಕೊಡದೆ ಗ್ಲಾಸ್‌ಗಳ ತಡೆಗೋಡೆಯ ಮಧ್ಯೆ ಪರಸ್ಪರ ಮಾತುಕತೆ ವ್ಯವಸ್ಥೆಯನ್ನು ಪಾಕಿಸ್ಥಾನ ಮಾಡಿತ್ತು. ಇಸ್ಲಾಮಾಬಾದ್‌ನಲ್ಲಿರುವ ವಿದೇಶಾಂಗ ಕಚೇರಿಯಲ್ಲಿ ಭೇಟಿ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬ ಸದಸ್ಯರು ಸುಮಾರು 40 ನಿಮಿಷಗಳ ಕಾಲ ಇಂಟರ್‌ಕಾಮ್‌ ಫೋನ್‌ ಮೂಲಕ ಮಾತುಕತೆ ನಡೆಸಿದ್ದಾರೆ.

ಪಾಕ್‌ ರಾಷ್ಟ್ರಪಿತ ಮಹಮ್ಮದ್‌ಅಲಿ ಜಿನ್ನಾರ ಜನ್ಮದಿನಾಚರಣೆ ಸಂದರ್ಭ ದಲ್ಲಿ ಮಾನವೀಯತೆ ದೃಷ್ಟಿಯಿಂದ ಭೇಟಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ಭೇಟಿ ಬಳಿಕ ಜಾಧವ್‌ರಿಂದ ಪಾಕನ್ನು ಹೊಗಳಿ ವೀಡಿಯೋ ಮಾಡಿಸಿಕೊಳ್ಳಲಾಗಿದ್ದು, ಇದಕ್ಕೂ ಮುನ್ನ ಜಾಧವ್‌ಗೆ ಹಿಂಸೆ ನೀಡಲಾಗಿದೆ ಎಂದು ಶಂಕಿಸಲಾಗಿದೆ.

ಈ ಹಿಂದೆ: ಈ ಮೊದಲು ಕುಟುಂಬ ದವರ ಭೇಟಿಗಾಗಿ 25 ಬಾರಿ ಭಾರತ ಕೋರಿದ್ದ ಮನವಿಯನ್ನು ಪಾಕಿಸ್ಥಾನ ತಿರಸ್ಕರಿಸಿತ್ತು. ಕೊನೆಗೆ ಪತ್ನಿಗೆ ಮಾತ್ರ ಅವಕಾಶ ನೀಡುವುದಾಗಿ ಹೇಳಿತ್ತು. ಆದರೆ ತಾಯಿ ಹಾಗೂ ಪತ್ನಿಗೆ ಅವಕಾಶ ನೀಡಬೇಕು ಮತ್ತು ಅವರ ಜತೆಗೆ ರಾಯಭಾರ ಕಚೇರಿ ಅಧಿಕಾರಿಗಳೂ ಇರಬೇಕು ಎಂದು ಭಾರತ ವಾದಿಸಿತ್ತು. ಆದರೆ ಇದಕ್ಕೆ ಒಪ್ಪದ ಪಾಕ್‌ ಕೊನೆಗೆ ಅಂತಾರಾಷ್ಟ್ರೀಯ ಒತ್ತಡದ ಬಳಿಕ ಸಮ್ಮತಿಸಿ, ಜಾಧವ್‌ ತಾಯಿ ಹಾಗೂ ಪತ್ನಿಗೆ ವೀಸಾ ನೀಡಿತ್ತು.

Advertisement

ಅಂತಾರಾಷ್ಟ್ರೀಯ ಕೋರ್ಟ್‌ಗೆ ಹೆದರಿ ಅವಕಾಶ: ಜಾಧವ್‌ ಭೇಟಿಗೆ 21 ತಿಂಗಳುಗಳ ಅನಂತರ ಅವಕಾಶ ನೀಡಿದ್ದು, ಅಂತಾರಾಷ್ಟ್ರೀಯ ಕೋರ್ಟ್‌ಗೆ ಹೆದರಿ ಎಂದು ಹೇಳ ಲಾಗುತ್ತಿದೆ. ಮುಂದಿನ ವಾರ ಅಂತಾ ರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ದಲ್ಲಿ ಜಾಧವ್‌ ಪ್ರಕರಣ ವಿಚಾರಣೆಗೆ ಬರಲಿದೆ. 

ಹೀಗಾಗಿ ಪಾಕ್‌ ತನ್ನ ಪರ ವಾದವನ್ನು ಬಲಗೊಳಿಸಿಕೊಳ್ಳಲು ಈ ನಾಟಕ ಮಾಡಿದೆ ಎನ್ನಲಾಗಿದೆ. ಆದರೆ ಇದನ್ನು ಮರೆಮಾಚಲು ಪಾಕ್‌, ಮಾನವೀಯತೆಯ ದೃಷ್ಟಿಯಿಂದ ಅವಕಾಶ ಒದಗಿಸಲಾಗಿದೆ ಎಂದು ಹೇಳಿಕೆ ನೀಡುತ್ತಿದೆ.

ಪಾಕ್‌ ಹೊಗಳಿದ ಜಾಧವ್‌ ವೀಡಿಯೋ: ಭೇಟಿ ಬಳಿಕ ಜಾಧವ್‌ ಮಾತನಾಡಿದ ಮೂರು ವೀಡಿಯೋಗಳನ್ನು ಪಾಕ್‌ ಬಿಡುಗಡೆ ಮಾಡಿದೆ. ಎರಡು ವೀಡಿಯೋಗಳಲ್ಲೂ ಉದ್ದೇಶ ಪೂರ್ವಕವಾಗಿ ಜಾಧವ್‌ರಿಂದ ಪಾಕಿಸ್ಥಾನಕ್ಕೆ ಧನ್ಯವಾದ ಹೇಳಿಸಲಾಗಿದೆ. ಪತ್ನಿ ಭೇಟಿ ಮಾಡಲು ನಾನು ವಿನಂತಿ ಮಾಡಿದ್ದೆ. ನನ್ನ ತಾಯಿ ಮತ್ತು ಪತ್ನಿ ನನ್ನನ್ನು ಭೇಟಿ ಮಾಡಲು ಬರುತ್ತಾರೆ ಎಂದು ನನಗೆ ತಿಳಿದುಬಂತು. ಈ ಉತ್ತಮ ನಡೆಗಾಗಿ ಪಾಕಿಸ್ಥಾನ ಸರಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಜಾಧವ್‌ ವೀಡಿಯೋದಲ್ಲಿ ಹೇಳಿದ್ದಾರೆ. ಈ ವೀಡಿಯೋ ಮಾಡುವ ಮುನ್ನ ಜಾಧವ್‌ಗೆ ಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಅವರ ಕಿವಿಯಲ್ಲಿ ಗಾಯದ ಗುರುತುಗಳೂ ಪತ್ತೆಯಾಗಿವೆ ಎನ್ನಲಾಗಿದೆ. ಯಾಕೆಂದರೆ ಕುಟುಂಬ ಭೇಟಿಗೆ ಅವಕಾಶ ನೀಡಬೇಕು ಎಂದು ಪಾಕ್‌ ಕಡೆಯಿಂದ ಭಾರತಕ್ಕೆ ಯಾವುದೇ ಪ್ರಸ್ತಾವ ಬಂದಿರಲಿಲ್ಲ. ಅಲ್ಲದೆ ಮೊದಲ ಬಾರಿಗೆ ಭಾರತವೇ ಈ ವಿನಂತಿ ಮಾಡಿತ್ತು. ಆದರೆ ಹಿಂಸಿಸಿರುವ ಆರೋಪವನ್ನು ತಳ್ಳಿಹಾಕಿರುವ ಪಾಕ್‌ ಸರಕಾರ, ಜಾಧವ್‌ ವೈದ್ಯಕೀಯ ತಪಾಸಣೆ ವರದಿಯನ್ನೂ ಬಿಡುಗಡೆ ಮಾಡಿದೆ.

ಭೇಟಿ ನಡೆದಿದ್ದು ಹೀಗೆ
ಸೋಮವಾರ ದಿಲ್ಲಿಯಿಂದ ಇಸ್ಲಾಮಾಬಾದ್‌ಗೆ ಜಾಧವ್‌ ತಾಯಿ ಹಾಗೂ ಪತ್ನಿ, ರಾಯಭಾರ ಕಚೇರಿ ಅಧಿಕಾರಿ ಜೆ.ಪಿ.ಸಿಂಗ್‌ ತೆರಳಿದರು. ಅನಂತರ ಇಸ್ಲಾಮಾಬಾದ್‌ನಲ್ಲಿರುವ ರಾಯಭಾರ ಕಚೇರಿಗೆ ಭೇಟಿ ನೀಡಿ, ಅಲ್ಲಿಂದ ವಿದೇಶಾಂಗ ಇಲಾಖೆಗೆ ತೆರಳಿದರು. ವಿದೇಶಾಂಗ ಇಲಾಖೆಯ ಆಘಾ ಶಾಹಿ ಬ್ಲಾಕ್‌ನಲ್ಲಿರುವ ಕಚೇರಿಯಲ್ಲಿ ಭೇಟಿ ನಡೆದಿದೆ. ಈ ಸನ್ನಿವೇಶದ ಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗಿದ್ದು, ಇವರು ಕಚೇರಿಗೆ ತೆರಳುತ್ತಿದ್ದ ವೀಡಿಯೋ ಬಿಡುಗಡೆ ಮಾಡಲಾಗಿದೆ. ಭೇಟಿ ಮಧ್ಯಾಹ್ನ 1.35ಕ್ಕೆ ಆರಂಭವಾಗಿದ್ದು, ಸುಮಾರು 45 ನಿಮಿಷಗಳವರೆಗೆ ನಡೆದಿದೆ. ಬಳಿಕ ಎಲ್ಲರೂ ಹೊರಬಂದು ಬಿಳಿ  ಎಸ್‌ಯುವಿ ಕಾರಿನಲ್ಲಿ ತೆರಳಿದ್ದಾರೆ. ಕುಟುಂಬದವರು ವಿದೇಶಾಂಗ ಇಲಾಖೆ ಕಚೇರಿಗೆ ಆಗಮಿಸುವುದಕ್ಕೂ ಮೊದಲೇ ಜಾಧವ್‌ರನ್ನು ಅಲ್ಲಿಗೆ ಕರೆತರಲಾಗಿತ್ತು. ಆದರೆ ಅಲ್ಲಿಗೆ ಕರೆತರುವುದಕ್ಕಿಂತಲೂ ಮೊದಲ ಜಾಧವ್‌ರನ್ನು ಎಲ್ಲಿಡಲಾಗಿತ್ತು ಎಂದು ಪಾಕ್‌ ವಿವರಿಸಿಲ್ಲ. ಭೇಟಿಯ ವಿವರಗಳನ್ನು ವಿದೇಶಾಂಗ ಇಲಾಖೆ ಮಾತ್ರವೇ ಬಿಡುಗಡೆ ಮಾಡುವಂತೆ ನೋಡಿಕೊಳ್ಳಲಾಗಿತ್ತು.

ಬಿಗಿ ಭದ್ರತೆ
ಭೇಟಿ ಹಿನ್ನೆಲೆಯಲ್ಲಿ ವಿದೇಶಾಂಗ ಇಲಾಖೆ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಕುಟುಂಬದವರನ್ನು ಏಳು ವಾಹನಗಳಲ್ಲಿ ಭದ್ರತಾ ಸಿಬಂದಿಯು ಹಿಂಬಾಲಿಸಿದ್ದು ಕಂಡುಬಂತು. ಕಚೇರಿಗೆ ಪೊಲೀಸರು, ಅರೆಸೇನಾ ಪಡೆಯ ಭದ್ರತೆ ಒದಗಿಸಲಾಗಿತ್ತು. ಇಲ್ಲಿನ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್‌ ಮಾಡಲಾಗಿತ್ತು.

ಫೋಟೋ ನಕಲು ಶಂಕೆ
ಜಾಧವ್‌ ಭೇಟಿ ಬಗ್ಗೆ ಚಿತ್ರವನ್ನು ಪಾಕ್‌ ಪ್ರಕಟಿಸಿದೆ. ಆದರೆ ಜಾಧವ್‌ ಮುಖಚಹರೆ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಅಲ್ಲದೆ ಇದು ಭೇಟಿ ಮಾಡುತ್ತಿರುವ ಸಮಯದಲ್ಲಿ ತೆಗೆದ ಚಿತ್ರವೇ ಅಥವಾ ಅದಕ್ಕೂ ಮೊದಲೇ ಚಿತ್ರಿಸಿದ್ದಾಗಿದೆಯೇ ಎಂಬ ಸಂಶಯ  ಮೂಡಿದೆ. ಇದಕ್ಕೆ ಪಾಕ್‌ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ.

ರಾಯಭಾರ ಸಂಪರ್ಕ?
ಸೋಮವಾರ ಜಾಧವ್‌ರನ್ನು ಕುಟುಂಬದವರು ಮಾಡುವ ಭೇಟಿಯ ವೇಳೆ ರಾಯಭಾರ ಸಂಪರ್ಕವೂ ಆಗಿದೆ ಎಂದು ಪಾಕ್‌ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್‌ ಆಸಿಫ್ ರವಿವಾರ ಪಾಕ್‌ ಟಿವಿ ಚಾನೆಲ್‌ ಒಂದರಲ್ಲಿ ಹೇಳಿದ್ದರು. ಆದರೆ ಸೋಮವಾರ ಈ ಹೇಳಿಕೆಯನ್ನು ಅಲ್ಲಗಳೆದ ಪಾಕ್‌, ಇದು ರಾಯಭಾರ ಸಂಪರ್ಕವಲ್ಲ. ಬದಲಿಗೆ ಕುಟುಂಬ ಭೇಟಿಯಷ್ಟೇ ಎಂದು ನಿಲುವು ಬದಲಿಸಿದೆ. ಅಲ್ಲದೆ, ಭೇಟಿ ನಡೆಯುತ್ತಿರುವ ಕೋಣೆಗೆ ರಾಯಭಾರ ಕಚೇರಿ ಅಧಿಕಾರಿ ತೆರಳಲು ಅಥವಾ ಅವರ ಮಾತುಕತೆಯನ್ನು ಆಲಿಸಲೂ ಅವಕಾಶ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next