ಕಂದಮಾಲ್: ಪಾಕ್ ಬಳಿ ಅಣುಬಾಂಬ್‌ಗಳಿವೆ ಎಂದು ಕಾಂಗ್ರೆಸ್ ದೇಶದ ಜನ ರನ್ನು ಹೆದರಿಸುತ್ತ ಬಂದಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಪಾಕ್ ಆರ್ಥಿಕತೆಯ ಬಗ್ಗೆಯೂ ವ್ಯಂಗ್ಯವಾಡಿರುವ ಅವರು, “ಪಾಕ್ ಬಳಿ ಅಣುಬಾಂಬ್‌ಇದ್ದರೂ ಅವುಗಳನ್ನು ಹೇಗೆ ಇಟ್ಟುಕೊಳ್ಳಬೇಕೆಂದೇ ಅವರಿಗೆ ಗೊತ್ತಿಲ್ಲ. ಅವುಗಳನ್ನು ಮಾರಾಟ ಮಾಡಲು ಪಾಕ್ ಯೋಜಿಸುತ್ತಿದೆ. ಆದರೆ ಕಳಪೆ ಗುಣಮಟ್ಟದಿಂದಾಗಿ ಅವುಗಳನ್ನು ಖರೀ
ದಿಸಲು ಯಾರೂ ಮುಂದೆ ಬರುತ್ತಿಲ್ಲ’ ಎಂದು ಲೇವಡಿ ಮಾಡಿದ್ದಾರೆ.
ಒಡಿಶಾದ ಕಂದಮಾಲ್ ನಲ್ಲಿ ಶನಿವಾರ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, “ಪಾಕ್ ಬಳಿ ಅಣುಬಾಂಬ್‌ಗಳಿವೆ. ಎಚ್ಚರ, ಅವರು ನಮ್ಮ ಮೇಲೆ ದಾಳಿ ಮಾಡಬಹುದು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ.
ಹೀಗೆ ಹೇಳುತ್ತ ಭಾರತೀಯರನ್ನೇ ಹೆದರಿಸುತ್ತ ಬರಲಾಗಿದೆ. ಈಗಲೂ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಪ್ರಸ್ತಾವಿಸಿ ಮೋದಿ, ಪಾಕ್ ಮತ್ತು ಕಾಂಗ್ರೆಸ್ ಎರಡನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವು ಅಯ್ಯರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
ಪಾಕಿಸ್ಥಾನದ ಬಳಿ ಅಣು ಬಾಂಬ್ ಇರುವ ಕಾರಣಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಈ ಹಿಂದಿನ ಕಾಂಗ್ರೆಸ್ ಸರಕಾರಗಳು ಹಕ್ಕು ಸಾಧಿಸದೆ ಸುಮ್ಮನಿದ್ದವು. ಆದರೆ ಮೋದಿ ಮತ್ತೆ ಪ್ರಧಾನಿಯಾದರೆ ಪಾಕಿಸ್ಥಾನದ ಗುಂಡುಗಳಿಗೆ ನಾವು ಫಿರಂಗಿಗಳಿಂದ ಉತ್ತರಿಸಲಿದ್ದೇವೆ.
–
ಅಮಿತ್ ಶಾ,
ಕೇಂದ್ರ ಗೃಹ ಸಚಿವ