Advertisement

ಪಾಕಿಸ್ತಾನ-ಮಯನ್ಮಾರ್‌ ಮೈತ್ರಿ ಬಂಧಕ್ಕೆ ಚೀನಾ ಮಧ್ಯಸ್ಥಿಕೆ

07:18 PM Nov 21, 2022 | Team Udayavani |

ನವದೆಹಲಿ: ಭಾರತದ ವಿರುದ್ಧ ಯಾವತ್ತೂ ಕುತ್ಸಿತ ಚಿಂತನೆಯನ್ನೇ ಪ್ರದರ್ಶನ ಮಾಡುವ ಪಾಕಿಸ್ತಾನಕ್ಕೆ ಚೀನಾ ನೆರವು ನೀಡುತ್ತಾ ಬರುತ್ತಿದೆ ಎನ್ನುವುದು ಹಳೆಯ ಸತ್ಯ. ಇದೀಗ ಮಯನ್ಮಾರ್‌ನಲ್ಲಿ ಇರುವ ಸೇನಾಡಳಿತ ಮತ್ತು ಪಾಕಿಸ್ತಾನ ಸೇನೆಯ ನಡುವೆ ಮೈತ್ರಿಬಂಧಕ್ಕೆ ಮಧ್ಯಸ್ಥಿಕೆ ವಹಿಸಿದೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ. ಜತೆಗೆ ಶಸ್ತ್ರಾಸ್ತ್ರ ಪೂರೈಕೆ, ತರಬೇತಿಯ ಬಗ್ಗೆಯೂ 2 ದೇಶಗಳ ನಡುವೆ “ಬಾಂಧವ್ಯ’ ಏರ್ಪಟ್ಟಿದೆ.

Advertisement

ಭಾರತಕ್ಕಂತೂ ಮುಂದಿನ ದಿನಗಳಲ್ಲಿ ಹೊಸ ಮೈತ್ರಿಕೂಟ ತಲೆನೋವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ. ಚೀನಾದ ಚಿತಾವಣೆ ಪ್ರಕಾರ ಕಳೆದ ತಿಂಗಳು ಪಾಕ್‌ ಸೇನೆಯ ಉನ್ನತ ಮಟ್ಟದ ಸೇನಾ ನಿಯೋಗವು ಮ್ಯಾನ್ಮಾರ್‌ಗೆ ಭೇಟಿ ನೀಡಿದೆ. ಯಾಂಗೋನ್‌ ಸಮೀಪದ ರಕ್ಷಣಾ ಕೈಗಾರಿಕಾ ಸಂಕೀರ್ಣದ ಪರಿಶೀಲನೆ ನಡೆಸಿತ್ತು. ಜತೆಗೆ, ಇಸ್ಲಾಮಾಬಾದ್‌ನಿಂದ ಮ್ಯಾನ್ಮಾರ್‌ ಖರೀದಿಸಿರುವ ಜೆಎಫ್-17 ಬ್ಲಾಕ್‌ 2 ವಿಮಾನದ ಕುರಿತಾದ ಕಾರ್ಯಾಗಾರದಲ್ಲೂ ಪಾಲ್ಗೊಂಡಿತ್ತು. ಪಾಕ್‌ನ ಇನ್ನೊಂದು ತಂಡ ಕೂಡ ಮ್ಯಾನ್ಮಾರ್‌ಗೆ ತೆರಳಿ, ಶಸ್ತ್ರಾಸ್ತ್ರಗಳ ತಯಾರಿಕೆಗೆ ಸಂಬಂಧಿಸಿದ ತಾಂತ್ರಿಕ ಸಹಕಾರ ಒದಗಿಸುವ ಕೆಲಸ ಮಾಡಿತ್ತು.

ಗಮನಾರ್ಹ ವಿಚಾರವೆಂದರೆ, ಪೂರ್ವದಲ್ಲಿನ ಭಾರತದ ನೆರೆರಾಷ್ಟ್ರವಾಗಿರುವ ಮ್ಯಾನ್ಮಾರ್‌ನೊಂದಿಗೆ ಪಾಕಿಸ್ತಾನವು ಸೇನಾ ಕೈಗಾರಿಕಾ ಪಾಲುದಾರಿಕೆ ಹೊಂದುತ್ತಿರುವುದಕ್ಕೆ ಮೂಲ ಪ್ರೇರಣೆಯೇ ಚೀನಾ. ಒಂದೆಡೆ ಪಾಕಿಸ್ತಾನವು ಯುದ್ಧ ಸಾಮಾಗ್ರಿಗಳ ಅಭಿವೃದ್ಧಿಯಲ್ಲಿ ಚೀನಾದೊಂದಿಗೆ ಆಳವಾದ ಬಾಂಧವ್ಯ ಹೊಂದಲು ಪ್ರಯತ್ನಿಸುತ್ತಿದೆ. ಮತ್ತೂಂದೆಡೆ, ತನ್ನ ದೇಶೀಯ ಶಸ್ತ್ರಾಸ್ತ್ರ ಉದ್ದಿಮೆಯನ್ನು ಬೆಳೆಸಬೇಕು ಎನ್ನುವುದು ಮ್ಯಾನ್ಮಾರ್‌ನ ಉದ್ದೇಶವಾಗಿದೆ. ಈ ಎರಡೂ ಅಂಶಗಳನ್ನು ಅರಿತಿರುವ ಚೀನಾವು, ಎರಡೂ ದೇಶಗಳನ್ನು ಬಳಸಿಕೊಂಡು ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ. ಚೀನಾದ ಬೆಂಬಲದೊಂದಿಗೆ ಪಾಕಿಸ್ತಾನವು ಮ್ಯಾನ್ಮಾರ್‌ಗೆ ಹೆವಿ ಮಷೀನ್‌ ಗನ್‌ಗಳು, 60 ಎಂಎಂ ಮತ್ತು 81 ಎಂಎಂ ಮೋರ್ಟಾರ್‌ಗಳು, ಎಂ-79 ಗ್ರೆನೇಡ್‌ ಲಾಂಚರ್‌ಗಳನ್ನು ಮಾರಾಟ ಮಾಡಿದೆ.

ರೋಹಿಂಗ್ಯಾ ಹಾಗೂ ಉಗ್ರ ಚಟುವಟಿಕೆ ವಿಚಾರದಲ್ಲಿ ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಪಾಕ್‌-ಮ್ಯಾನ್ಮಾರ್‌ಗಳನ್ನು ಈಗ ಚೀನಾವು ಶಸ್ತ್ರಾಸ್ತ್ರ ಪಾಲುದಾರ ದೇಶಗಳನ್ನಾಗಿ ಬದಲಿಸಿದೆ.

ಚೀನಾ ಸೇನೆಯ ಚಲನವಲನಗಳ ಮೇಲೆ ನಿಗಾ :

Advertisement

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೇನಾ ಪಡೆಗಳ ನಿಯೋಜನೆಯಲ್ಲಿ ಬದಲಾವಣೆ ಆಗುತ್ತದೆ. ಆದರೆ, ಈ ಬಾರಿ ಚೀನಾ ಸೇನೆಯ ಚಲನವಲನಗಳನ್ನು ಗಮನಿಸಿಯೇ ಮುಂದಿನ ಹೆಜ್ಜೆಯಿಡಲು ಭಾರತೀಯ ಸೇನೆ ನಿರ್ಧರಿಸಿದೆ.

ಚೀನಾ ಸೇನೆಯ ವೆಸ್ಟರ್ನ್ ಥಿಯೇಟರ್‌ ಕಮಾಂಡ್‌ ಮೇಲೆ ಮತ್ತು ಚೀನಾದ ಕಮ್ಯೂನಿಸ್ಟ್‌ ಪಾರ್ಟಿಯ 20ನೇ ಸಮಾವೇಶಕ್ಕೂ ಮುನ್ನ ನಿಯೋಜಿಸಲಾಗಿದ್ದ ಮೂರು ಸಶಸ್ತ್ರ ಬ್ರಿಗೇಡ್‌ಗಳ ಚಲನವಲನಗಳ ಮೇಲೆ ಭಾರತೀಯ ಸೇನೆ ನಿಗಾ ಇಟ್ಟಿದೆ. ಈ ಮೂರು ಬ್ರಿಗೇಡ್‌ಗಳು ವಾಪಸ್‌ ತಮ್ಮ ನೆಲೆಗೆ ಹೋಗುತ್ತದೋ ಇಲ್ಲವೋ ಎನ್ನುವುದರ ಮೇಲೆ ಭಾರತೀಯ ಸೇನಾಪಡೆಯ ಚಳಿಗಾಲದ ನಿಯೋಜನೆಯು ಅವಲಂಬಿತವಾಗಿದೆ.

ಚೀನಾ ಸೇನೆಯ ಒಂದು ಬ್ರಿಗೇಡ್‌ ಚೀನಾ-ಭೂತಾನ್‌ ಗಡಿಯ ಸಿಲಿಗುರಿ ಕಾರಿಡಾರ್‌ನ ಫಾರಿ ಝಾಂಗ್‌ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟಿದೆ. ಇನ್ನೆರಡು ಬ್ರಿಗೇಡ್‌ಗಳು ಅರುಣಾಚಲ ಪ್ರದೇಶದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next