Advertisement

ಆರ್ಥಿಕ ದೃಢತೆ ಮುಖ್ಯ; ಟ್ಯಾಂಕು, ಮಿಸೈಲು ದೇಶ ಉಳಿಸದು: ಪಾಕ್‌ ಸಚಿವ

07:02 PM May 22, 2018 | Team Udayavani |

ಇಸ್ಲಾಮಾಬಾದ್‌ : ”ಟ್ಯಾಂಕುಗಳು, ಮಿಸೈಲ್‌ಗ‌ಳು ದೇಶವನ್ನು ಉಳಿಸಲಾರವು; ಆರ್ಥಿಕವಾಗಿ ದೇಶ ಬಲಿಷ್ಠವಾಗುವುದು ಮುಖ್ಯ; ಅದಕ್ಕಾಗಿ ದೇಶದಲ್ಲಿ ಶಾಂತಿ, ಸ್ಥಿರತೆ ನೆಲೆಸುವುದು ಇನ್ನೂ ಅಗತ್ಯ” ಎಂದು ಪಾಕಿಸ್ಥಾನದ ಒಳಾಡಳಿತ ಸಚಿವ ಎಹಸಾನ್‌ ಇಕ್ಬಾಲ್‌ ಹೇಳಿದ್ದಾರೆ. 

Advertisement

‘1990ರ ದಶಕದಲ್ಲಿ ಭಾರತದ ಆಗಿನ ಹಣಕಾಸು ಸಚಿವ ಡಾ. ಮನಮೋಹನ್‌ ಸಿಂಗ್‌ ಅವರು ಅಂದಿನ ಪಾಕ್‌ ಹಣಕಾಸು ಸಚಿವ ಸರ್ತಾಜ್‌ ಅಜೀಜ್‌ ಅವರಿಂದ ಆರ್ಥಿಕ ಸುಧಾರಣಾ ತಂತ್ರಗಾರಿಕೆಯ ಎರವಲು ಪಡೆದುಕೊಂಡು ಅದನ್ನು ಭಾರತದಲ್ಲಿ ಅನುಷ್ಠಾನಿಸಿ ಯಶಸ್ವಿಯಾದರು’ ಎಂದು ಪಾಕ್‌ ಸಚಿವ ಇಕ್ಬಾಲ್‌ ಹೇಳಿರುವುದನ್ನು “ದ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

‘ಬಾಂಗ್ಲಾದೇಶ ಕೂಡ ಸರ್ತಾಜ್‌ ಅವರ ಆರ್ಥಿಕ ಸುಧಾರಣಾ ತಂತ್ರಗಾರಿಕೆಯನ್ನು ಅನುಷ್ಠಾನಿಸಿ ಯಶಸ್ವಿಯಾಗಿದೆ. ದುರದೃಷ್ಟವಶಾತ್‌ ಪಾಕಿಸ್ಥಾನ ಮಾತ್ರ ತನ್ನದೇ ತಂತ್ರಗಾರಿಕೆಯನ್ನು ಅನುಷ್ಠಾನಿಸುವಲ್ಲಿ ವಿಫ‌ಲವಾಯಿತು;  ದೇಶದಲ್ಲಿನ ರಾಜಕೀಯ ಅಸ್ಥಿರತೆಯ ಫ‌ಲವಾಗಿ ಪಾಕಿಸ್ಥಾನಕ್ಕೆ ಇಡಿಯ ಒಂದು ದಶಕವೇ ನಷ್ಟವಾಗಿ ಹೋಯಿತು’ ಎಂದು ಸಚಿವ ಇಕ್ಬಾಲ್‌ ಹೇಳಿದರು. 

ಸಚಿವ ಇಕ್ಬಾಲ್‌ ಅವರು ಪಾಕಿಸ್ಥಾನದ ರಾಷ್ಟ್ರೀಯ ಸೈಬರ್‌ ಭದ್ರತಾ ಕೇಂದ್ರವನ್ನು ಉದ್ಘಾಟಿಸಿ ಈ ಮಾತುಗಳನ್ನು ಹೇಳಿದರು. 

”ಪಾಕಿಸ್ಥಾನಕ್ಕೆ ತನ್ನ ಆರ್ಥಿಕತೆಯನ್ನು ಟೇಕಾಫ್ ಮಾಡುವ ಮೊದಲ ಅವಕಾಶ 1960ರ ದಶಕದಲ್ಲಿ ಒದಗಿತ್ತು. ಅನಂತರ 90ರ ದಶಕದಲ್ಲಿ ಎರಡನೇ ಅವಕಾಶ ಪ್ರಾಪ್ತವಾಯಿತು. ಇದೀಗ ಮೂರನೇ ಅವಕಾಶ ಪಾಕ್‌ ಬಾಗಿಲನ್ನು ತಟ್ಟುತ್ತಿದೆ. ಪಾಕಿಸ್ಥಾನ ಈ ಹಿಂದೆ ರಾಜಕೀಯ ಅಸ್ಥಿರತೆಯಿಂದ ಮಾಡಿಕೊಂಡಂತೆ ಈ ಮೂರನೇ ಅವಕಾಶವನ್ನು ನಷ್ಟ ಮಾಡಿಕೊಳ್ಳಬಾರದು. ಆದದ್ದು ಆಗಿ ಹೋಗಿದೆ; ಇನ್ನು ಪುನಃ ಅದೇ ಆಗಬಾರದು” ಎಂದು ಸಚಿವ ಇಕ್ಬಾಲ್‌ ನುಡಿದರು. 

Advertisement

‘ಪಾಕಿಸ್ಥಾನದ ಆರ್ಥಿಕಾಭಿವೃದ್ಧಿಗೆ ಶಾಂತಿ, ಸ್ಥಿರತೆ ಮತ್ತು ನಿರಂತರತೆ ನೆಲೆಗೊಳ್ಳುವುದು ಬಹಳ ಮುಖ್ಯ’ ಎಂದು ಇಕ್ಬಾಲ್‌ ಹೇಳಿದರು. 

‘2013ರಲ್ಲಿ ಪಾಕಿಸ್ಥಾನ 2ಜಿ ವಯರ್‌ಲೆಸ್‌ ತಂತ್ರಜ್ಞಾನ ಬಳಸುತ್ತಿತ್ತು. ಆದರೆ ಈಗ 2018ರಲ್ಲಿ ಅದು 5ಜಿ ತಂತ್ರಜ್ಞಾನ ಉಪಯೋಗಿಸುವ ವಿಶ್ವದ ಮೊದಲ ಬಳಕೆದಾರರಲ್ಲಿ ಒಂದೆನಿಸಿದೆ’ ಎಂದು ಇಕ್ಬಾಲ್‌ ಹೇಳಿದರು. 

ಆದರೆ ಪಾಕ್‌ ಸಚಿವ ಎಹಸಾನ್‌ ಇಕ್ಬಾಲ್‌ ಆಶಯಕ್ಕೂ, ಅವರ ದೇಶದ ಸೇನೆ, ಐಎಸ್‌ಐ ಮತ್ತು ಉಗ್ರರ ಆಶಯಕ್ಕೂ ಯಾವುದೇ ತಾಳಮೇಳ ಇಲ್ಲದಿರುವುದು ಇಡಿಯ ಜಗತ್ತಿಗೇ ತಿಳಿದಿರುವ ಸತ್ಯ ಎನ್ನದೇ ವಿಧಿಯಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next