ಹೊಸದಿಲ್ಲಿ : ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರಿಗೆ ಆಸರೆ, ಬೆಂಬಲ, ಹಣಕಾಸು ನೆರವು, ತರಬೇತಿ, ವಾಹನ ಸೌಕರ್ಯ ಇತ್ಯಾದಿಗಳನ್ನು ಒದಗಿಸಿ ಭಾರತ, ಇರಾನ್, ಅಫ್ಘಾನಿಸ್ಥಾನದ ಮೇಲೆ ಉಗ್ರರಿಂದ ದಾಳಿ ನಡೆಸಿ ಅಪಾರ ಜೀವ ಬಲಿ ಪಡೆಯುತ್ತಿರುವ ಪಾಕಿಸ್ಥಾನವನ್ನು ಹಣಿಯಲು ಭಾರತ, ಇರಾನ್ ಮತ್ತು ಅಫ್ಘಾನಿಸ್ಥಾನ ಈಗ ತೀವ್ರ ಒತ್ತಡಕ್ಕೆ ಗುರಿಯಾಗಿವೆ. ಅಂತೆಯೇ ಪಾಕಿಸ್ಥಾನ ತನ್ನ ನೆರೆಯ ಈ ಮೂರು ದೇಶಗಳಿಂದಲೇ ಸೇನಾ ಕಾರ್ಯಾಚರಣೆಯನ್ನು ಎದುರಿಸಬೇಕಾಗಿ ಬಂದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕಳೆದೊಂದು ವಾರದಲ್ಲಿ ಭಾರತದಂತೆ ಇರಾನ್ ಕೂಡ ಪಾಕ್ ಬೆಂಬಲಿತ ಉಗ್ರರಿಂದ ತನ್ನ 27 ಸೈನಿಕರು ಹತರಾಗಿರುವುದನ್ನು ಕಂಡಿದೆ; ಅಂತೆಯೇ ಪಾಕ್ ವಿರುದ್ಧ ಅದು ಕುದಿಯಲಾರಂಭಿಸಿದೆ.
ಅಫ್ಘಾನಿಸ್ಥಾನದಲ್ಲಿ ದಿನನಿತ್ಯವೆಂಬಂತೆ ತಾಲಿಬಾನ್ ಉಗ್ರರಿಂದ ಆತ್ಮಾಹುತಿ ಬಾಂಬ್ ದಾಳಿಯೇ ಮೊದಲಾದ ಹಲವು ರೀತಿಯ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿರುವ ಹೊರತಾಗಿಯೂ ಪಾಕಿಸ್ಥಾನ, ತಾಲಿಬಾನನ್ನು ‘ಶಾಂತಿ ಮಾತಕತೆಗೆ’ ಆಹ್ವಾನಿಸಿದೆ. ಇದರಿಂದ ಅಫ್ಘಾನಿಸ್ಥಾನ ಕೂಡ ಪಾಕ್ ವಿರುದ್ಧ ಕುದಿಯತೊಡಗಿದೆ.
ಪಾಕ್ ಪೋಷಣೆಯಲ್ಲಿ ತಾಲಿಬಾನ್ ಬಳಿಕದ ಎರಡನೇ ಅತ್ಯಂತ ಬಲಿಷ್ಠ ಉಗ್ರ ಸಂಘಟನೆ ಎಂದರೆ ಜೈಶ್ ಎ ಮೊಹಮ್ಮದ್. ಇದನ್ನು ಪಾಕಿಸ್ಥಾನ ಭಾರತ ವಿರುದ್ಧ ಉಗ್ರ ದಾಳಿಗೆ ತರಬೇತುಗೊಳಿಸಿ ಛೂ ಬಿಡುತ್ತಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯನ್ನು ಈ ಹಿಂದೆಯೇ ನಿಷೇಧಿಸಿದೆ. ಆದರೆ ಇದರ ಮುಖ್ಯಸ್ಥ ಅಜರ್ ಮಸೂದ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸುವ ವಿಶ್ವಸಂಸ್ಥೆಯ ಕ್ರಮಕ್ಕೆ ಚೀನ ಅಡ್ಡಗಾಲು ಹಾಕಿಕೊಂಡು ಬಂದಿದೆ.
ಪಾಕ್ ಬೆಂಬಲಿತ ಉಗ್ರರ ಕೈಯಲ್ಲಿ ಕಳೆದ ವಾರ ಇರಾನಿನ 27 ರೆಲಲ್ಯೂಶನರಿ ಗಾರ್ಡ್‌ಗಳು ಹತರಾಗಿದ್ದಾರೆ. ಇದನ್ನು ಅನುಸರಿಸಿ ಇರಾನಿನ ಚೀಫ್ ಮೇಜರ್ ಜನರಲ್ ಮೊಹಮ್ಮದ್ ಅಲಿ ಜಫಾರಿ ಅವರು ಪಾಕಿಸ್ಥಾನಕ್ಕೆ ‘ಇದಕ್ಕೆ ಭಾರೀ ಬೆಲೆ ತರಬೆಕಾಗುವುದು’ ಎಂಬ ಕಠಿನ ಎಚ್ಚರಿಕೆಯನ್ನು ನೀಡಿದ್ದಾರೆ.
ತಾಲಿಬಾನ್ ಜತೆಗೆ ಭಾರೀ ತಾಳಮೇಳ ಹೊಂದಿರುವ ಪಾಕಿಸ್ಥಾನ ನಿಜಕ್ಕಾದರೆ ತಾಲಿಬಾನ್‌ಗೆ ವಸ್ತುತಃ ಗಾಡ್ ಫಾದರ್ ಆಗಿದೆ. ಉಗ್ರರಿಗೆ ಪಾಕ್ ಬೆಂಬಲ ನೀಡಿ ತನ್ನ ಮೇಲೆ ದಾಳಿ ನಡೆಸುತ್ತಿದೆ ಎಂದು ಅಫ್ಘಾನಿಸ್ಥಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಈಗಾಗಲೇ ದೂರು ನೀಡಿದೆ.