Advertisement

ಪಾಕ್ ನಲ್ಲಿ ಗಣಿ ಕುಸಿತ: ಉತ್ಖನನದಲ್ಲಿ ನಿರತರಾಗಿದ್ದ 22 ಜನರು ಸಾವು, ಹಲವರ ಸ್ಥಿತಿ ಗಂಭೀರ

09:08 AM Sep 09, 2020 | Mithun PG |

ಪೇಷಾವರ: ಪಾಕಿಸ್ತಾನದ ಜಿಯಾರತ್ ಘರ್ ಪರ್ವತ ಪ್ರದೇಶದ ಮಾರ್ಬಲ್ (ಅಮೃತಶಿಲೆಯ) ಕ್ವಾರಿಯಲ್ಲಿ ಸಂಭವಿಸಿದ ಗಣಿ ಕುಸಿತದಿಂದಾಗಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ, ಮತ್ತು ಅವಶೇಷಗಳಡಿ ಅನೇಕರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

Advertisement

ಅತ್ಯುತ್ತಮ ಗುಣಮಟ್ಟದ ಅಮೃತಶಿಲೆಗೆ ಹೆಸರುವಾಸಿಯಾದ ಅಫಘಾನಿಸ್ತಾನ್ ಗಡಿಯಲ್ಲಿರುವ ಈ ಪ್ರದೇಶದಲ್ಲಿ ಆರು ಘಟಕಗಳ ಅಮೃತಶಿಲೆ ಗಣಿಗಳು ಸೋಮವಾರ ರಾತ್ರಿ ಕುಸಿದಿವೆ. ಇದುವರೆಗೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿವೆ. ಇಂದೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ರಕ್ಷಣಾ ಕಾರ್ಯಗಳಿಗೆ ಭಾರೀ ಗಾತ್ರದ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.

ಜಿಯಾರತ್ ಘರ್ ಪರ್ವತದಲ್ಲಿನ ಆರು ಗಣಿಗಳು ಏಕಾಏಕಿ ಕುಸಿದಿದ್ದರಿಂದ ಕಾರ್ಮಿಕರ ಮೇಲೆ ಭಾರೀ ಗಾತ್ರದ ಬಂಡೆಗಳು ಉರುಳಿಬಿದ್ದಿದೆ. ಸ್ಥಳದಲ್ಲೇ 12 ಜನರು ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಇನ್ನೂ 10 ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಅನೇಕರು ಪ್ರಾಂತೀಯ ರಾಜಧಾನಿ ಪೇಶಾವರದಿಂದ 85 ಕಿ.ಮೀ ದೂರದಲ್ಲಿರುವ ಅಫ್ಘಾನಿಸ್ತಾನ ಗಡಿಯ ಬಳಿಯಿರುವ.ಸಫಿ ಪ್ರದೇಶದವರು. ಇನ್ನೂ ಅನೇಕರು ಅವಶೇಷಗಳಡಿ ಸಿಲುಕಿ ಬಿದ್ದಿದ್ದು ಮೃತರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಗಣಿ ಕುಸಿದಾಗ ಸುಮಾರು 45 ಕಾರ್ಮಿಕರು ಉತ್ಖನನ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಈಗಾಗಲೇ ಒಂಬತ್ತು ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಪಿಡಿಎಂಎ) ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next