ಗುರುದಾಸ್ ಪುರ:ಪಾಕಿಸ್ತಾನದ ಗಡಿಭಾಗದ ಸಮೀಪದ ಚಕ್ರಿ ಪೋಸ್ಟ್ ಬಳಿ 11 ಗ್ರೆನೇಡ್ಸ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಪಂಜಾಬ್ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಡ್ರೋನ್ ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತದ ಗಡಿಪ್ರದೇಶದ ಒಂದು ಕಿಲೋ ಮೀಟರ್ ಒಳಗೆ ಹನ್ನೊಂದು ಗ್ರೆನೇಡ್ಸ್ ಪತ್ತೆಯಾಗಿತ್ತು. ಗುರುದಾಸ್ ಪುರದ ಡೋರಾಂಗ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸಲಾಛ್ ಎಂಬ ಗ್ರಾಮದ ಗದ್ದೆಪ್ರದೇಶದ ಸಮೀಪ ಗ್ರೆನೇಡ್ಸ್ ದೊರೆತಿರುವುದಾಗಿ ವರದಿ ವಿವರಿಸಿದೆ.
ಗ್ರನೇಡ್ಸ್ ಮೇಲೆ ಆರ್ ಜಿಎಸ್ ಮಾರ್ಕ್ ಇದ್ದಿದ್ದು, ಪತ್ತೆಯಾದ ಎಲ್ಲಾ ಗ್ರೆನೇಡ್ಸ್ ಗಳು ಪಾಕಿಸ್ತಾನ ನಿರ್ಮಿತವಾಗಿದೆ ಎಂದು ವರದಿ ವಿವರಿಸಿದೆ. ಡೋರಾಂಗ್ಲಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಡುರಸ್ತೆಯಲ್ಲಿ ಯುವತಿಯ ಮೇಲೆ ತಲವಾರು ದಾಳಿ ನಡೆಸಿದ ಹುಚ್ಚುಪ್ರೇಮಿ!
ಇತ್ತೀಚೆಗಷ್ಟೇ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಪಾಕಿಸ್ತಾನ ಮೂಲದ ಸ್ಮಗ್ಲರ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.