Advertisement
ಇಸ್ರೇಲ್ ಮತ್ತು ಯುಎಇ ನಡುವೆ ಸಂಬಂಧ ಸುಧಾರಣೆಗಾಗಿ ಐತಿಹಾಸಿಕ ಒಪ್ಪಂದವಾಗುತ್ತಿದ್ದಂತೆಯೇ ಇತ್ತ ಪಾಕಿಸ್ಥಾನದಲ್ಲಿ ಮತ್ತೆ ಎಂದಿನಂತೆ ಚರ್ಚೆ ಆರಂಭವಾಗಿದೆ. ಇಸ್ರೇಲ್ ಅನ್ನು ಒಂದು ರಾಷ್ಟ್ರವೆಂದು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ಚರ್ಚೆ ಅದು.
Related Articles
Advertisement
ಪಾಕಿಸ್ಥಾನವು ದಶಕಗಳಿಂದಲೂ ಸೈದ್ಧಾಂತಿಕವಾಗಿ ಗಲ್ಫ್ ಮತ್ತು ಅರಬ್ ಜಗತ್ತಿನೊಂದಿಗೆ ತನ್ನನ್ನು ತಾನು ಸಮೀಕರಿಸಿಕೊಳ್ಳುತ್ತದೆ. ಹಾಗಾದರೆ ಈಗ ಆ ರಾಷ್ಟ್ರಗಳು ಇಸ್ರೇಲ್ ಜತೆ ಸಂಬಂಧ ಸುಧಾರಣೆಗೆ ಮುಂದಾಗಿರುವುದರಿಂದ, ಪಾಕಿಸ್ಥಾನವೂ ತನ್ನ ರಾಜಕೀಯ ದೃಷ್ಟಿಕೋನವನ್ನು ಬದಲಿಸಿಕೊಳ್ಳಲಿದೆಯೇ?
ಎಲ್ಲವೂ ಯಹೂದಿ ಲಾಬಿವಿಭಜನೆಯ ನಂತರದಿಂದಲೂ ಪಾಕಿಸ್ಥಾನವು ಇಸ್ರೇಲ್ ಅನ್ನು ಗುರುತಿಸಲು ನಿರಾಕರಿಸುತ್ತದೆ. ಇಸ್ರೇಲ್ ಅನ್ನು ಒಂದು ರಾಷ್ಟ್ರವಾಗಿ ಗುರುತಿಸುವುದಕ್ಕೂ ಸಿದ್ಧವಿಲ್ಲ ಎಂದಮೇಲೂ ಅದರ ಬಗ್ಗೆ ಪಾಕಿಸ್ಥಾನ ಇಷ್ಟೇಕೆ ತಲೆಕೆಡಿಸಿಕೊಳ್ಳುತ್ತದೆಯೋ ತಿಳಿಯದು. ಅಷ್ಟೇ ಅಲ್ಲ, ಅತ್ತ ಇಸ್ರೇಲ್ ಕೂಡ ಪಾಕಿಸ್ಥಾನದ ಬಗ್ಗೆ ತಲೆಕೆಡಿಸಿಕೊಂಡಿದೆ ಎಂದು ಪಾಕಿಸ್ತಾನಿಯರು ಭಾವಿಸುತ್ತಾರೆ. ಅದೂ ನಿಜ! ಏಕೆಂದರೆ, ಇಡೀ ಬ್ರಹ್ಮಾಂಡದ ಕೇಂದ್ರ ಬಿಂದುವೇ ಪಾಕಿಸ್ಥಾನವಲ್ಲವೇ?! ಇಸ್ರೇಲ್ ತನ್ನ ವಿರುದ್ಧ ಷಡ್ಯಂತ್ರ ರಚಿಸುತ್ತಿದೆ ಎಂಬ ಭಾವನೆ ಪಾಕಿಸ್ಥಾನದಲ್ಲಿ ಯಾವ ಪರಿ ಬೇರೂರಿದೆಯೆಂದರೆ, ಪಾಕ್ ವಿರುದ್ಧದ ಶಕ್ತಿಗಳನ್ನೆಲ್ಲ “ಯಹೂದಿಗಳು’ ಎಂದೇ ಕರೆಯಲಾಗುತ್ತದೆ, ಪಾಕ್ ವಿರುದ್ಧದ ಲಾಬಿಗಳನ್ನೆಲ್ಲ “ಯಹೂದಿ ಲಾಬಿ’ ಎಂದೇ ಬಣ್ಣಿಸಲಾಗುತ್ತದೆ. ಈ ವಿಚಾರದಲ್ಲಿ ನಂತರದ ಸ್ಥಾನದಲ್ಲಿರುವುದು, ಅಂದರೆ ಪಾಕಿಸ್ಥಾನವು ದೂರುವುದು ಹಿಂದೂಗಳು ಮತ್ತು ಭಾರತದ ರಾ ಗುಪ್ತಚರ ಏಜೆನ್ಸಿಯನ್ನು. ಇತ್ತೀಚೆಗೆ ಪಾಕ್ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಅಸೀಮ್ ಬಾಜ್ವಾ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಬಾಜ್ವಾ ಪಾಕಿಸ್ಥಾನದ ಮಿಲಿಟರಿಯಲ್ಲಿ ಎತ್ತರಕ್ಕೇರುತ್ತಾ ಹೋದಂತೆಯೇ ಅವರ ಕುಟುಂಬದ ಆಸ್ತಿಯೂ ವಿಶ್ವಾದ್ಯಂತ ಏರುತ್ತಲೇ ಹೋಯಿತು ಎನ್ನುವ ಆರೋಪವದು. ಆದರೆ ಈ ಆರೋಪ ಬಂದಾಕ್ಷಣ ಮತ್ತೆ ಎಂದಿನಂತೆ ‘ಇದು ಭಾರತ ಹಾಗೂ ರಾ ಗುಪ್ತಚರ ಸಂಸ್ಥೆಯ ಷಡ್ಯಂತ್ರ’ ಎಂದು ಹೇಳಿ, ಆರೋಪವನ್ನು ತಳ್ಳಿಹಾಕಲಾಯಿತು. ಬಾಲಾಕೋಟ್ ದಾಳಿ, ಇಸ್ರೇಲ್ ಪೈಲಟ್‌ಗಳು!
ಇಸ್ರೇಲ್ ವಿಚಾರಕ್ಕೆ ಹಿಂದಿರುಗುವುದಾದರೆ, ಇಸ್ರೇಲ್‌ನೊಂದಿಗೆ ಪಾಕಿಸ್ಥಾನ ಮೈತ್ರಿ ಮಾಡಿಕೊಳ್ಳಬೇಕು ಎಂದು ವಾದಿಸುವವರೂ ಇದ್ದಾರೆ. ಆದರೆ ಅವರು ಇದಕ್ಕೆ ಕೊಡುವ ಕಾರಣವೇ ಬೇರೆ. ಅವರ ಪ್ರಕಾರ ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಉತ್ತಮವಾಗಿದ್ದು, ಅವೆರಡೂ ರಾಷ್ಟ್ರಗಳು ಪಾಕಿಸ್ಥಾನದ ವಿರುದ್ಧ ಸಂಚು ರೂಪಿಸುತ್ತಲೇ ಇರುತ್ತವಂತೆ. ಹೀಗಾಗಿ, ಈ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಇಸ್ರೇಲ್‌ನೊಂದಿಗೆ ಪಾಕಿಸ್ಥಾನ ಮೈತ್ರಿ ಮಾಡಿಕೊಳ್ಳಬೇಕು ಎನ್ನುವುದು ಅವರ ವಾದ. ಇಸ್ರೇಲ್‌ನ ಬಗ್ಗೆ ಪಾಕಿಸ್ತಾನಿಯರಲ್ಲಿ ಯಾವ ರೀತಿಯ ಭ್ರಮೆ ಇದೆಯೆಂದರೆ, ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್‌ರನ್ನು ಬಂಧಿಸಲಾಯಿತಲ್ಲ, ಆಗ ಅರ್ಧಕ್ಕರ್ಧ ಪಾಕಿಸ್ತಾನಿಯರು, “ಇಸ್ರೇಲ್‌ನ ಪೈಲಟ್ ಸಿಕ್ಕಿಬಿದ್ದಿದ್ದಾನೆ” ಎಂದೇ ನಂಬಿದ್ದರು. ಇನ್ನರ್ಧ ಪಾಕಿಸ್ತಾನಿಯರು, ಬಾಲಾಕೋಟ್ ಮೇಲಿನ ದಾಳಿಯನ್ನು ಮುನ್ನಡೆಸಿದ್ದೇ ಇಸ್ರೇಲ್‌ನ ಪೈಲಟ್‌ಗಳು ಎಂದು ನಂಬುತ್ತಾರೆ! ಪಾಕಿಸ್ಥಾನದ ಪಾಸ್‌ಪೋರ್ಟ್‌ನಲ್ಲಿ ಹೀಗೆ ಬರೆದಿರುತ್ತದೆ: “ಇಸ್ರೇಲ್ ಅನ್ನು ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಿಗೂ ಈ ಪಾಸ್‌ಪೋರ್ಟ್ ಮಾನ್ಯ” ಎಂದು! ಹಾಗಿದ್ದರೆ, ಪಾಕಿಸ್ಥಾನದಲ್ಲಿರುವ ಕ್ರಿಶ್ಚಿಯನ್ನರು ಅಥವಾ ಯಹೂದಿಗಳು ಇಸ್ರೇಲ್‌ಗೆ ಹೋಗಬೇಕು ಎಂದು ಬಯಸಿದರೆ ಏನು ಮಾಡಬೇಕು? ಬಹುಶಃ ನಮ್ಮ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾರನ್ನು ಅಪ್ಪಿಕೊಂಡ ನವಜೋತ್ ಸಿಂಗ್ ಸಿಧು ಈ ವಿಚಾರದಲ್ಲಿ ಅವರಿಗೆಲ್ಲ ಸಹಾಯ ಮಾಡಬಹುದೇನೋ! ಇಸ್ರೇಲ್‌ನ ವಿಚಾರದಲ್ಲಿ ನಮ್ಮಲ್ಲಿ ಮನಸ್ಥಿತಿ ಹೇಗಿದೆಯೆಂದರೆ, ಪಿಟಿಐನ ಸಂಸದರೊಬ್ಬರು ಸಂಸತ್ತಿನಲ್ಲಿ ಮಾತನಾಡುತ್ತಾ “ಇಸ್ರೇಲ್‌ನೊಂದಿಗೆ ಪಾಕ್ ಒಪ್ಪಂದ ಮಾಡಿಕೊಳ್ಳಬೇಕು, ಮುಸಲ್ಮಾನರು ಮತ್ತು ಯಹೂದಿಯರು ಶಾಂತಿಯ ದಾರಿ ಹುಡುಕಬೇಕು” ಎಂದು ಸಲಹೆ ನೀಡಿದರು. ಅವರು ಹೀಗೆ ಹೇಳುತ್ತಲೇ, ಪಿಟಿಐ ಪಕ್ಷ “ಯಹೂದಿ ಅಜೆಂಡಾ’ಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂಬ ಕೂಗು ಜೋರಾಗಿತ್ತು. ಒಟ್ಟಲ್ಲಿ, ಇಸ್ರೇಲ್ ಅನ್ನು ಒಂದು ರಾಷ್ಟ್ರವಾಗಿ ಗುರುತಿಸಬೇಕೋ, ಬೇಡವೋ ಎನ್ನುವುದಕ್ಕಿಂತ ಮುಂಚೆ ಪಾಕಿಸ್ಥಾನವು, ಒಂದು ರಾಷ್ಟ್ರವಾಗಿ ತನಗೆ ಏನು ಬೇಕು ಎನ್ನುವುದನ್ನು ಗುರುತಿಸಿಕೊಳ್ಳುವುದು ಒಳಿತು. ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ “ಧಾರ್ಮಿಕ ಭಾವನೆಗಳಿಗಿಂತ ಅಂತಾರಾಷ್ಟ್ರೀಯ ಸಂಬಂಧಗಳು ಮುಖ್ಯ’ ಎಂದು ಒಮ್ಮೆ ಹೇಳಿದ್ದರು. ಆದರೆ ಈ ಮಾತನ್ನು ಪಾಕಿಸ್ಥಾನದಲ್ಲಿ ಯಾರೂ ಅಳವಡಿಸಿಕೊಳ್ಳುತ್ತಿಲ್ಲ. ಒಟ್ಟಲ್ಲಿ, ಸದ್ಯಕ್ಕಂತೂ ಪಾಕಿಸ್ಥಾನಕ್ಕೆ ಇಸ್ರೇಲ್ ನಂಬರ್ 1 ಶತ್ರುರಾಷ್ಟ್ರವಾಗಿ ಬದಲಾಗಿದೆ. ಕೆಲ ಸಮಯದವರೆಗಾದರೂ ಭಾರತಕ್ಕೆ ಈ ವಿಷಯದಲ್ಲಿ ಬ್ರೇಕ್ ಸಿಕ್ಕಿದೆ. – ಎನ್. ಇನಾಯತ್, ಪಾಕ್ ಮೂಲದ ಪತ್ರಕರ್ತೆ
(ಎನ್. ಇನಾಯತ್ ಪಾಕ್ ಮೂಲದ ಪತ್ರಕರ್ತೆಯಾಗಿದ್ದು, ಈಗ ಕತಾರ್‌ನಲ್ಲಿ ವಾಸಿಸುತ್ತಿದ್ದಾರೆ.) (ಕೃಪೆ: ಅಮರ್ ಉಜಾಲಾ)