ಇಸ್ಲಾಮಾಬಾದ್: ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತು ಸೇನೆ ನಡುವಿನ ಸಂಘರ್ಷವನ್ನು ಬಗೆಹರಿಸುವ ನಿಟ್ಟಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮಧ್ಯಪ್ರವೇಶಿಸಬೇಕೆಂದು ಪಾಕಿಸ್ತಾನದ ಐಎಸ್ ಐ (ISI) ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥನ ವಿರುದ್ಧ ಜನರು ಆಕ್ರೋಶಗೊಂಡಿದ್ದ ಪರಿಣಾಮ ಯುಎಇ ಮೊದಲು ಮಧ್ಯಪ್ರವೇಶಿಸುವ ಪ್ರಸ್ತಾಪವನ್ನು ತಿರಸ್ಕರಿಸಿತ್ತು.
ಇಮ್ರಾನ್ ಖಾನ್ ನಿಕಟವರ್ತಿ ಡಾ.ಸಲ್ಮಾನ್ ಅಹ್ಮದ್ ಸಿಎನ್ ಎನ್-ನ್ಯೂಸ್ 18 ಜತೆ ಮಾತನಾಡುತ್ತ, ಸೇನೆ ಮತ್ತು ಇಮ್ರಾನ್ ನಡುವಿನ ಭಿನಾಭಿಪ್ರಾಯ ಬಗೆಹರಿಸುವ ನಿಟ್ಟಿನಲ್ಲಿ ಪಾಕ್ ಸೇನೆ ಯುಎಇ ಅಧಿಕಾರಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸಿತ್ತು. ಈ ವಿಚಾರವಾಗಿ ಐಎಸ್ ಐ ನಿಯೋಗವೊಂದು ಯುಎಇಗೆ ತೆರಳಿರುವುದಾಗಿ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಸೇನಾ ವರಿಷ್ಠ ಅಸೀಂ ಮುನೀರ್ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪ್ರಸ್ತಾಪದ ಬಗ್ಗೆ ಯುಎಇ ಹೆಚ್ಚು ಆಸಕ್ತಿ ಹೊಂದಿಲ್ಲ ಎಂಬುದಾಗಿ ಮೂಲಗಳು ಹೇಳಿವೆ. ಪಾಕಿಸ್ತಾನ ಸೇನೆ ಮತ್ತು ಪಿಡಿಎಂ ಸೇರಿದಂತೆ ಎರಡೂ ಕೂಡಾ ಆಡಳಿತ ನಡೆಸುವಲ್ಲಿ ವಿಫಲವಾಗಿರುವುದಾಗಿ ಯುಎಇ ಮತ್ತು ಕೆಎಸ್ ಎ ನಂಬಿರುವುದಾಗಿ ವರದಿ ತಿಳಿಸಿದೆ.
ಇಮ್ರಾನ್ ಖಾನ್ ಬನಿಗಾಲಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಮತ್ತೊಂದೆಡೆ ಇಮ್ರಾನ್ ಖಾನ್ ಅವರ ಜೀವ ಅಪಾಯದಲ್ಲಿದ್ದು, ಪಾಕಿಸ್ತಾನ ಸೇನೆ ಅವರನ್ನು ಹ*ತ್ಯೆಗೈಯಲು ಬಯಸುತ್ತಿರುವುದಾಗಿ ಮೂಲಗಳು ಹೇಳಿವೆ.
ಗುಂಡಿನ ದಾಳಿ, ಕರ್ಫ್ಯೂ:
ಮಂಗಳವಾರವೂ ಇಮ್ರಾನ್ ಖಾನ್ ಮತ್ತು ಭದ್ರತಾ ಪಡೆಯ ನಡುವಿನ ಸಂಘರ್ಷ ಮುಂದುವರಿದಿದ್ದು, ಇಡೀ ಇಸ್ಲಾಮಾಬಾದ್ ನಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ಕರ್ಫ್ಯೂ ವಿಧಿಸಲಾಗಿದೆ. ಆದರೂ ಮುನ್ನುಗ್ಗಿ ಬಂದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಐದಾರು ಮಂದಿ ಸಾವನ್ನಪ್ಪಿದ್ದಾರೆ.