ಸ್ಯಾನ್ ಫ್ರಾನ್ಸಿಸ್ಕೋ:ಎಲ್ಲಾ ಭಯೋತ್ಪಾದಕ ದಾಳಿಯ ಹೆಜ್ಜೆಗುರುತುಗಳನ್ನು ಪಾಕಿಸ್ಥಾನ ಹೊಂದಿ ಇಡೀ ಜಗತ್ತಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಹಿರಿಯ ಬಿಜೆಪಿ ನಾಯಕ ರಾಮ್ ಮಾಧವ್ ಅವರು ಅಮೆರಿಕಾದಲ್ಲಿ ಹೇಳಿಕೆ ನೀಡಿದ್ದಾರೆ.
ಮಾಧವ್ ಅವರು ಭಾರತೀಯ-ಅಮೆರಿಕನ್ನರು ನಡೆಸಿದ ‘ಜಾಗತಿಕ ಭಯೋತ್ಪಾದನಾ ವಿರೋಧಿ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರನಾಗಿ ಮಾತನಾಡಿ, ‘ವಿಶ್ವ ಸಮುದಾಯವು ಜಾಗತಿಕ ಭಯೋತ್ಪಾದನೆಯ ಕೇಂದ್ರವನ್ನು ನಿಭಾಯಿಸುವ ಅಗತ್ಯವಿದೆ’ ಎಂದರು.
‘ಪಾಕಿಸ್ಥಾನ ಭಾರತಕ್ಕೆ ಮಾತ್ರವಲ್ಲದೇ ವಿಶ್ವಕ್ಕೆ ತಲೆನೋವು, ಆ ದೇಶವನ್ನು ವಿಶೇಷವಾಗಿ ಪರಿಗಣಿಸಬೇಕಾಗಿದೆ’ ಎಂದರು.
‘ಉಗ್ರವಾದದ ಹೆಜ್ಜೆ ಗುರುತುಗಳನ್ನು ಪಾಕಿಸ್ಥಾನದಲ್ಲಿ ಕಾಣಬಹುದು. ಭಯೋತ್ಪಾದಕರನ್ನು ಪ್ರಾಯೋಜಿಸುವ, ಉತ್ತೇಜಿಸುವ, ಆರ್ಥಿಕವಾಗಿ ಬೆಂಬಲಿಸುವ ಮತ್ತು ರಕ್ಷಿಸುವ ದೇಶವು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ, ನಾವು ಆ ದೇಶವನ್ನು ನಿಭಾಯಿಸಬೇಕಾಗಿದೆ’ ಎಂದು ಮಾಧವ್ ಹೇಳಿದರು.
‘ವಾಷಿಂಗ್ಟನ್ ಡಿಸಿಯಲ್ಲಿನ ಕೆಲ ಬುದ್ಧಿಜೀವಿಗಳ ಗುಂಪು ಪಾಕಿಸ್ಥಾನ ಮತ್ತು ಅದರ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಅನ್ನು ರಕ್ಷಿಸುವಲ್ಲಿ ನಿರತವಾಗಿದೆ.ಆದರೆ ಈ ಭಯೋತ್ಪಾದಕ ಗುಂಪುಗಳು ಐಎಸ್ ಐ ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂದರು.
ಹಾಸ್ಯ ಚಟಾಕಿ ಹಾರಿಸಿದ ಮಾಧವ್, ‘ಕೆಲವು ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಲಿ, ನಾವು ಅವರನ್ನು ನಿಯಂತ್ರಣಕ್ಕೆ ತರುತ್ತೇವೆ’ ಎಂದರು.