ಇಸ್ಲಾಮಾಬಾದ್ : ಭಾರತದಲ್ಲಿ ಪಂಚ ರಾಜ್ಯಗಳ ಚುನಾವಣೆಗಳು ಮುಗಿದ ಬಳಿಕ ಶಾಂತಿ ಮಾತುಕತೆಗೆ ಉತ್ತಮ ವಾತಾವರಣ ಏರ್ಪಡುವುದೆಂಬ ವಿಶ್ವಾಸ ಪಾಕಿಸ್ಥಾನಕ್ಕೆ ಇದೆ ಎಂದು ಯೋಜನೆ ಮತ್ತು ಅಭಿವೃದ್ಧಿ ಸಚಿವ ಎಹಸಾನ್ ಇಕ್ಬಾಲ್ ಸಮಾವೇಶವೊಂದರಲ್ಲಿ ಹೇಳಿದ್ದಾರೆ.
“ಮುಂದಿನ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಪಂಚ ರಾಜ್ಯಗಳ ಚುನಾವಣೆಗಳು ಮುಗಿಯಲಿವೆ ಮತ್ತು ಆ ಹೊತ್ತಿಗೆ ಭಾರತದೊಂದಿಗೆ ಶಾಂತಿ ಮಾತುಕತೆಯನ್ನು ಹೊಸದಾಗಿ ಆರಂಭಿಸುವುದಕ್ಕೆ ಯೋಗ್ಯವಾದ ವಾತಾವರಣ ಏರ್ಪಡಲಿದೆ ಎಂಬ ವಿಶ್ವಾಸ ನಮಗಿದೆ. ಅಂತೆಯೇ ಭಾರತದೊಂದಿಗೆ ಶಾಂತಿ ಮಾತುಕತೆಗೆ ನಾವು ಸಂಪೂರ್ಣವಾಗಿ ಬದ್ಧರಿದ್ದೇವೆ’ ಎಂದು ಸಚಿವ ಎಹಸಾನ್ ಇಕ್ಬಾಲ್ ಹೇಳಿದರು.
ಅಮೆರಕದ ಉನ್ನತ ಚಿಂತನ ಚಾವಡಿಯಾಗಿರುವ ಯುಎಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸದ ಸಚಿವ ಇಕ್ಬಾಲ್, “ಭಾರತದಲ್ಲಿನ ಪಂಚ ರಾಜ್ಯ ಚುನಾವಣೆಯಲ್ಲಿ ಪಾಕಿಸ್ಥಾನವು ಒಂದು ವಿಷಯವಾಗಿದೆ; ಪ್ರಧಾನಿ ನವಾಜ್ ಷರೀಫ್ ಅವರು ಈ ವಲಯದಲ್ಲಿ ಶಾಂತಿಯ ಪ್ರಬಲ ಪ್ರತಿಪಾದಕರಾಗಿದ್ದಾರೆ’ ಎಂದು ಹೇಳಿದರು.
ಭಾರತದ ಸೇನಾ ಶಿಬಿರಗಳ ಮೇಲೆ, ವಾಯು ನೆಲೆಯ ಮೇಲೆ ಪಾಕ್ ಉಗ್ರರು ದಾಳಿ ನಡೆಸಿರುವುದು; ಕದನ ವಿರಾಮ ಉಲ್ಲಂಘನೆ ಮಾಡಿರುವುದು, ನಿರಂತರವಾಗಿ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುವುದು ಮತ್ತು ಉಗ್ರರಿಗೆ ಸರ್ವ ರೀತಿಯ ನೆರವನ್ನು ಪಾಕ್ ಸರಕಾರ ಕೊಡುತ್ತಿರುವುದು ಮುಂತಾಗಿ ಹಲವಾರು ಕಾರಣಗಳಿಂದ ಭಾರತ – ಪಾಕ್ ಶಾಂತಿ ತೀವ್ರ ಪ್ರಮಾಣದಲ್ಲಿ ಕದಡಿದೆ ಮತ್ತು ಉಭಯ ದೇಶಗಳ ನಡುವಿನ ಗಡಿ ಬಿಕ್ಟಟ್ಟು ತೀವ್ರವಾಗಿ ಉಲ್ಬಣಿಸಿದೆ; ಪರಿಣಾಮವಾಗಿ ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆ ಸಂಪೂರ್ಣವಾಗಿ ನಿಂತುಹೋಗಿದೆ. ಮೇಲಾಗಿ ಪಾಕಿಸ್ಥಾನಕ್ಕೆ ಭಯೋತ್ಪಾದನೆ ಪ್ರವರ್ತಕ ದೇಶವೆಂಬ ಹಣೆ ಪಟ್ಟಿ ಸಿಗುವ ಸಾಧ್ಯತೆಗಳೂ ಇವೆ. ಈ ಎಲ್ಲ ಕಾರಣದಿಂದ ಅಂತಾರಾಷ್ಟ್ರೀಯವಾಗಿ ಪ್ರತ್ಯೇಕಗೊಂಡಿರುವ ಪಾಕಿಸ್ಥಾನ ಕೊನೆಗೂ ಭಾರತದೊಂದಿಗೆ ಶಾಂತಿ ಮಾತುಕತೆಯ ಅಗತ್ಯವನ್ನು ಕಂಡುಕೊಂಡಿರುವುದಾಗಿ ತಿಳಿಯಲಾಗಿದೆ.