ಇಸ್ಲಮಾಬಾದ್: ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ಥಾನದಲ್ಲಿ ಇದೀಗ ಇಂಧನ ಬೆಲೆ ಗಗನಕ್ಕೇರಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 272 ಪಾಕಿಸ್ಥಾನಿ ರೂಪಾಯಿ ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 280 ಪಾ.ರೂ ಆಗಿದೆ.
ಇತಿಹಾಸದಲ್ಲೇ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ಥಾನದ ನಾಗರಿಕರಿಗೆ ಇಂಧನ ಬೆಲೆಗಳ ಹೆಚ್ಚಳವು ಹೆಚ್ಚಿನ ಹೊರೆಯಾಗಿದೆ.
ಶೆಹಬಾಜ್ ಷರೀಫ್ ಸರ್ಕಾರವು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪೂರಕ ಹಣಕಾಸು ಮಸೂದೆಯನ್ನು ಮಂಡಿಸಿದ ಕೆಲವೇ ಗಂಟೆಗಳಲ್ಲಿ ಈ ಇಂಧನ ಬೆಲೆ ಏರಿಕೆಯಾಗಿದೆ. ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು 170 ಶತಕೋಟಿ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯನ್ನು ಶೇಕಡಾ 18 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ.
ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಪೆಟ್ರೋಲ್ ಬೆಲೆ 22.20 ರೂ ನಷ್ಟು ಹೆಚ್ಚಾಗಿದೆ. ಡೀಸೆಲ್ ಬೆಲೆಯಲ್ಲಿ 17 ರೂ ಹೆಚ್ಚಾಗಿದ್ದು, ಸೀಮೆಎಣ್ಣೆ ಕೂಡ ದುಬಾರಿಯಾಗಿದೆ. ಸೀಮೆ ಎಣ್ಣೆ ಪ್ರತಿ ಲೀಟರ್ ಗೆ 202.73 ರೂ ಗೆ ಮಾರಾಟ ವಾಗುತ್ತಿದೆ. ಹೊಸ ಬೆಲೆಗಳು ಗುರುವಾರ ಮಧ್ಯರಾತ್ರಿ 12 ಗಂಟೆಯಿಂದ ಜಾರಿಗೆ ಬರಲಿವೆ.
ಇದನ್ನೂ ಓದಿ:“ನಿನ್ನ ಕೆನ್ನೆಗೆ ಬಾರಿಸುತ್ತೇನೆ”-ಮಹಿಳಾ ಪೋಲಿಸ್ ಅಧಿಕಾರಿಗೆ ಬಿಜೆಪಿ ಮುಖಂಡನ ಧಮ್ಕಿ
ಪಾಕಿಸ್ಥಾನದಲ್ಲಿ ದೈನಂದಿನ ಮತ್ತು ಅಡುಗೆ ಬಳಕೆ ವಸ್ತುಗಳ ಬೆಲೆಯಲ್ಲೂ ಗಮನಾರ್ಹ ಏರಿಕೆಯಾಗಿದೆ. ಒಂದು ಲೀಟರ್ ಹಾಲಿನ ಬೆಲೆ 210 ರೂ ಗೆ ಹೆಚ್ಚಾಗಿದ್ದು, ಒಂದು ಕಿಲೋ ಕೋಳಿಯ ಬೆಲೆ 700-800 ರೂ ತನಕ ಏರಿದೆ. ಇತರ ಅಗತ್ಯ ವಸ್ತುಗಳಾದ ಗೋಧಿ, ಬೇಳೆಕಾಳುಗಳು ಮತ್ತು ತರಕಾರಿಗಳ ಬೆಲೆಗಳು ಸಹ ಹೆಚ್ಚಿನ ಮಟ್ಟದಲ್ಲಿಯೇ ಇವೆ.