ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನರ ಪರದಾಟವೂ ಹೆಚ್ಚಾಗಿದೆ.
ದೇಶದಲ್ಲಿ ಒಟ್ಟು 3.3 ಕೋಟಿ ಜನರಿಗೆ ಮಳೆಯಿಂದಾಗಿ ಸಂಕಷ್ಟ ಎದುರಾಗಿದ್ದು, 982 ಮಂದಿ ಸಾವನ್ನಪ್ಪಿದ್ದಾರೆ.
1,456 ಮಂದಿ ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದಾರೆ. ಶುಕ್ರವಾರ ಒಂದೇ ದಿನ 45 ಮಂದಿ ಮಳೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದಿದೆ ಸರ್ಕಾರ.
ಸರಿ ಸುಮಾರು 7 ಲಕ್ಷ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಅಥವಾ ಹಾನಿಗೊಳಗಾಗಿವೆ. 57 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. 150 ಸೇತುವೆಗಳು ಮುರಿದು ಬಿದ್ದಿವೆ. 3000 ಕಿ.ಮೀ.ನಷ್ಟು ಉದ್ದದ ರಸ್ತೆಯು ಹಾಳಾಗಿದೆ ಎಂದೂ ಸರ್ಕಾರ ಹೇಳಿದೆ.
ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಪ್ರಧಾನಿ ಶೆಹಬಾಜ್ ಶರೀಫ್ ಅವರು ಸೇನೆಯನ್ನೂ ಬಳಸಿಕೊಳ್ಳುವುದಕ್ಕೆ ಆದೇಶಿಸಿದ್ದಾರೆ. ಸದ್ಯ ಪಾಕಿಸ್ತಾನದ ಅರ್ಧ ಭಾಗ ನೀರಿನಲ್ಲಿ ಮುಳುಗಿದೆ ಎಂದು ಅಲ್ಲಿನ “ಡಾನ್’ ವೆಬ್‌ಸೈಟ್ ಶನಿವಾರ ವರದಿ ಮಾಡಿದೆ.
ನೆರೆ ಪೀಡಿತ ಪ್ರದೇಶಗಳಿಗೆ ಪ್ರಧಾನಿ ಶೆಹಬಾಜ್ ಷರೀಫ್, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿ ಅನೇಕ ಗಣ್ಯರು ಮತ್ತು ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.