ಹೊಸದಿಲ್ಲಿ : ಗುಜರಾತ್ ಗಡಿ ಸಮೀಪ ಭಾರತೀಯ ವಾಯು ಪಡೆ ಹೊಸ ವಾಯು ನೆಲೆಯೊಂದನ್ನು ರೂಪಿಸುವ ಯೋಜನೆ ಹೊಂದಿದ್ದು ಇದು ಪಾಕಿಸ್ಥಾನಕ್ಕೆ ನಡುಕ ಉಂಟು ಮಾಡಿದೆ.
“ಪಾಕ್ ಗಡಿ ಸಮೀಪ ಗುಜರಾತ್‌ನಲ್ಲಿ ಭಾರತೀಯ ವಾಯು ಪಡೆ ವಾಯು ನೆಲೆಯೊಂದನ್ನು ರೂಪಿಸಲು ಮುಂದಾಗಿರುವುದು ಅದರ ಬೇಜವಾಬ್ದಾರಿಯ ವರ್ತನೆಯಾಗಿದೆ. ಇದು ಅತ್ಯಂತ ಅಪಾಯಕಾರಿ ಕ್ರಮವಾಗಿದೆ’ ಎಂದು ಪಾಕಿಸ್ಥಾನ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.
ಗುಜರಾತ್‌ನ ಬನಸ್‌ಕಾಂತ್ ಜಿಲ್ಲೆಯ ದೆಸ್ಸಾದಲ್ಲಿ ಭಾರತೀಯ ವಾಯು ಪಡೆಯು ನಿರ್ಮಿಸಲಿರುವ ಹೊಸ ವಾಯು ನೆಲೆಯಿಂದಾಗಿ ಭಾರತಕ್ಕೆ ಪಾಕ್ ವಿರುದ್ಧ ವಾಯು ಪ್ರಾಬಲ್ಯ ದೊರಕಲಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಭಾರತೀಯ ವಾಯು ಪಡೆಯು ಗುಜರಾತ್‌ನಲ್ಲಿ ವಾಯು ನೆಲೆ ನಿರ್ಮಿಸಲಿದೆ ಎಂಬ ಸ್ಫೋಟಕ ವಿಷಯವನ್ನು ಪ್ರಟಿಸಿದ್ದರು.
ಭಾರತದ ಉಪಕ್ರಮವು ಮಿಲಿಟರಿ ಪಾರಮ್ಯದಲ್ಲಿ ಶೀತಲ ಆರಂಭಕ್ಕೆ ಕಾರಣವಾಗಿದೆ. ಇಂತಹ ಯೋಜನೆಯನ್ನು ಭಾರತ 2001ರಲ್ಲಿ ಪಾಕ್ ಉಗ್ರರು ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿದಾಗಲೇ ಆಲೋಚಿಸಿತ್ತು. ಅದೀಗ ಕಾರ್ಯಗತಗೊಳ್ಳುವ ಹಂತವನ್ನು ತಲುಪಿದೆ.
ಈ ವಾಯು ನೆಲೆ ನಿರ್ಮಾಣಗೊಂಡಾ ಭಾರತೀಯ ಭದ್ರತಾ ಪಡೆಗಳಿಗೆ
ಅತ್ಯಂತ ಕಿರು ಮುನ್ನೆಚ್ಚರಿಕೆಯೊಂದಿಗೆ ಪಾಕ್ ಗಡಿಯೊಂದಿಗಿನ ಈ ಭಾಗದಲ್ಲಿ ಸಂಘಟಿತ ಸಮರ ಹೂಡಲು ಸಾಧ್ಯವಾಗುವುದು. ಪಾಕಿಸ್ಥಾನ ಭಾರತದ ಈ ಕ್ರಮದ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ದ ನ್ಯೂಸ್ ಇಂಟರ್‌ನ್ಯಾಶಲ್, ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಸಲ್ ಅವರನ್ನು ಉಲ್ಲೇಖೀಸಿ ವರದಿ ಮಾಡಿದೆ.