ಜಿನೇವಾ: ಪಾಕಿಸ್ತಾನ ಎನ್ನುವುದು ಭಯೋತ್ಪಾದನೆಯ ಉಗಮ ಕೇಂದ್ರ. ಆ ದೇಶದ ಪ್ರಧಾನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಕೃತ್ಯಗಳಿಗೆ ತರಬೇತಿ ನೀಡುವ ವಿಚಾರವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಭಾರತ ಕಟುವಾಗಿ ಟೀಕಿಸಿದೆ. ಜಿನೇವಾದಲ್ಲಿ ಮಂಗಳವಾರ ನಡೆದ ಮಾನವ ಹಕ್ಕುಗಳ ಮಂಡಳಿಯ 45ನೇ ಸಭೆಯಲ್ಲಿ ಭಾರತದ ಪ್ರತಿನಿಧಿ ನೆರೆಯ ರಾಷ್ಟ್ರದ ವಿರುದ್ಧ ಪ್ರಬಲ ಆರೋಪಗಳನ್ನು ಮಾಡಿದ್ದಾರೆ.
ಮಾನವ ಹಕ್ಕುಗಳನ್ನು ಕಾಪಾಡಿಕೊಳ್ಳುವುದರ ಬಗ್ಗೆ ಭಾರತಕ್ಕೆ ಇಸ್ಲಾಮಾಬಾದ್ ಕಡೆಯಿಂದ ಯಾವುದೇ ರೀತಿಯ ಉಪದೇಶ ಬೇಡ. ಭಾರತಕ್ಕೆ ಬೋಧನೆ ಮಾಡುವ ದೇಶವೇ ತನ್ನಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯದವರ ಹಕ್ಕುಗಳನ್ನು ದಮನಿಸುತ್ತಿದೆ ಎಂದು ಹೇಳಿದ್ದಾರೆ.
ಅದೇ ದೇಶದಲ್ಲಿ ಭಾರತದ ವಿರುದ್ಧ ಹೋರಾಟ ನಡೆಸಲು ಉಗ್ರ ಕೃತ್ಯಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಹೀಗಾಗಿ, ಪಾಕಿಸ್ತಾನ ಭಯೋತ್ಪಾದನೆ ಮತ್ತು ಉಗ್ರ ಚಟುವಟಿಕೆಯ ಉಗಮ ಕೇಂದ್ರ ಎಂದು ಭಾರತದ ಪ್ರತಿನಿಧಿ ಆರೋಪ ಮಾಡಿದ್ದಾರೆ.
ಪ್ರಧಾನಿಯಿಂದಲೇ ಒಪ್ಪಿಗೆ: ವಿಶ್ವಸಂಸ್ಥೆ ಯಿಂದಲೇ ನಿಷೇಧಕ್ಕೆ ಒಳಪಟ್ಟ ವ್ಯಕ್ತಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಕೃತ್ಯ ಗಳನ್ನು ನಡೆಸುತ್ತಾರೆ. ಅವರಿಗೆ ತರಬೇತಿ ನೀಡುವ ವಿಚಾರವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೆಮ್ಮೆಯಿಂದ ಹೇಳಿ ಕೊಳ್ಳುತ್ತಾರೆ ಎಂದು ತರಾಟೆಗೆ ತೆಗೆದು ಕೊಂಡರು. ಹೀಗಾಗಿಯೇ ಜಗತ್ತಿನ ಹೆಚ್ಚಿನ ರಾಷ್ಟ್ರಗಳು ಉಗ್ರ ಸಂಬಂಧಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಕಳವಳ ಹೊಂದಿರು ವುದು ಸರಿಯಾಗಿಯೇ ಇದೆ ಎಂದು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರ ಧಾರ್ಮಿಕಹಕ್ಕುಗಳನ್ನು ಮೊಟಕುಗೊಳಿಸುವಕ್ರಮಗಳು,ದೈವನಿಂದನೆ ಕಾಯ್ದೆಯ ಅನ್ವಯ ಪ್ರಕರಣ ದಾಖಲು ಮಾಡುವುದು ಸೇರಿದಂತೆ ಹಲವು ಅಕ್ರಮ ನಡೆಸುತ್ತಿರುವುದು ಜಗತ್ತಿಗೆ ಗೊತ್ತಿರದೇ ಇರುವ ವಿಚಾರ ಏನಲ್ಲ ಎಂದರು.