ನವದೆಹಲಿ: ಖುದ್ದು ಪಾಕಿಸ್ತಾನ ಸರ್ಕಾರವೇ ತನ್ನ ಪ್ರಜೆಯಲ್ಲ ತಿರಸ್ಕರಿಸಿರುವ ಮೊಹಮ್ಮದ್ ಖಮಾರ್ (62) ಎಂಬಾತ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ.
ಕಳೆದ ಏಳು ವರ್ಷಗಳಿಂದ ತಾನು ಬಂಧನದಲ್ಲಿರುವ ನವದೆಹಲಿಯ ಬಂಧನ ಗೃಹದಿಂದ ತನ್ನನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾನೆ.
ಹಾಗೊಂದು ವೇಳೆ ಆತನ ಬಿಡುಗಡೆಗೊಂಡಿದ್ದೇ ಆದರೆ, ದೇಶದಲ್ಲಿಯೇ ಜನಿಸಿದ ಆತನ ಐವರು ಮಕ್ಕಳು, ಪತ್ನಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಸೂರ್ಯಕಾಂತ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ವಕೀಲರ ಮುಖಾಂತರ ಅರಿಕೆ ಮಾಡಿಕೊಂಡಿದ್ದಾನೆ. ಪ್ರಕರಣದ ವಿಚಾರಣೆ ಫೆ. 28ಕ್ಕೆ ನಡೆಯಲಿದೆ.
2011 ಆ.8ರಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ವೀಸಾ ಅವಧಿ ಮೀರಿ ದೇಶದಲ್ಲಿ ನೆಲೆಸಿದ್ದಕ್ಕಾಗಿ ಬಂಧಿಸಲಾಗಿತ್ತು. ಈ ಆರೋಪಕ್ಕಾಗಿ ಆತನಿಗೆ 3 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು 500 ರೂ. ದಂಡ ವಿಧಿಸಲಾಗಿತ್ತು.
ಇದನ್ನೂ ಓದಿ:ಅಮೆರಿಕಾ ಎಚ್ಚರಿಕೆಯ ನಡುವೆಯೂ ಉಕ್ರೇನ್ ಮೇಲೆ ರಷ್ಯಾ ದಾಳಿ?
2015ರ ಫೆ.6ರಂದು ಶಿಕ್ಷೆ ಮುಕ್ತಾಯಗೊಂಡ ಬಳಿಕ ಆತನನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿ, ಆತನ ಹಸ್ತಾಂತರದ ಪ್ರಸ್ತಾವನೆಯನ್ನು ಭಾರತ ಸರ್ಕಾರ, ಪಾಕಿಸ್ತಾನ ಸರ್ಕಾರಕ್ಕೆ ಕಳುಹಿಸಿತ್ತು.
ಆದರೆ, ಪ್ರಸ್ತಾವನೆಯನ್ನು ತಿರಸ್ಕರಿಸಿದ ಪಾಕಿಸ್ತಾನ ಸರ್ಕಾರ, ಖಮಾರ್‌ನನ್ನು ತನ್ನ ಪ್ರಜೆಯೇ ಅಲ್ಲವೆಂದು ಹೇಳಿತು. ಹಾಗಾಗಿ, ಆತನನ್ನು ಉತ್ತರ ದೆಹಲಿ ಜಿಲ್ಲೆಯ ಲಾಂಪುರದಲ್ಲಿರುವ ಬಂಧನ ಗೃಹಕ್ಕೆ ಕಳುಹಿಸಲಾಗಿತ್ತು.