ಇಸ್ಲಾಮಾಬಾದ್ : ಸಂಸದ ಸ್ಥಾನದಿಂದ ತನ್ನನ್ನು ಅನರ್ಹಗೊಳಿಸಿದ ಪಾಕಿಸ್ತಾನ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ ಮೇಲ್ಮನವಿಯನ್ನು ಪಾಕಿಸ್ತಾನ ಕೋರ್ಟ್ ಸೋಮವಾರ (ಅಕ್ಟೋಬರ್ 24) ವಜಾಗೊಳಿಸಿದೆ.
ವಾಸ್ತವವಾಗಿ, ಚುನಾವಣಾ ಆಯೋಗವು ತೋಷ್ಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಮುಂದಿನ ಐದು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿತ್ತು.
ಈ ಅರ್ಜಿಯಲ್ಲಿ, ಅನರ್ಹತೆಯ ನಿರ್ಧಾರವನ್ನು ತಕ್ಷಣವೇ ಅಮಾನತುಗೊಳಿಸುವಂತೆ ಇಮ್ರಾನ್ ಖಾನ್ ಮನವಿ ಮಾಡಿದ್ದರು. ಆದರೆ ನ್ಯಾಯಾಲಯವು ಇಮ್ರಾನ್ ಖಾನ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ಬೆಲೆಬಾಳುವ ಉಡುಗೊರೆಗಳ ಮಾರಾಟದಿಂದ ಬಂದ ಹಣವನ್ನು ಬಚ್ಚಿಟ್ಟ ಆರೋಪದಲ್ಲಿ ಇಮ್ರಾನ್ ಖಾನ್ ಅವರನ್ನು ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಶುಕ್ರವಾರ (ಅಕ್ಟೋಬರ್ 21) ನಿರ್ಬಂಧಿಸಿದೆ.
ಈ ಸಂಬಂಧ ಇಮ್ರಾನ್ ಅವರು ತಮ್ಮ ವಕೀಲ ಬ್ಯಾರಿಸ್ಟರ್ ಅಲಿ ಜಾಫರ್ ಮೂಲಕ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇಂದು ವಿಚಾರಣೆ ನಡೆಸಿತು. ತೋಷಖಾನಾಗೆ ಉಡುಗೊರೆಯಾಗಿ ನೀಡಿದ್ದ ಮೂರು ವಾಚ್ ಗಳನ್ನು ಇಮ್ರಾನ್ ಖಾನ್ ಸ್ಥಳೀಯ ವಾಚ್ ಡೀಲರ್ ಗೆ 15.4 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.