ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಸಿಬಂದಿ ಕುಲಭೂಷಣ್ ಜಾಧವ್ ಅವರ ಪರವಾಗಿ ವಾದ ಮಂಡಿಸಲು ಭಾರತದ ವಕೀಲರನ್ನು ನೇಮಿಸಲು ಅನುವು ಮಾಡಿಕೊಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಪಾಕ್ ಸರಕಾರಕ್ಕೆ ಸೂಚಿಸಿದೆ.
ಜಾಧವ್ ಪರವಾಗಿ ವಾದ ಮಾಡಲು ಇತ್ತೀಚೆಗೆ ಪಾಕ್ ಸರಕಾರ ತನ್ನದೇ ವಕೀಲರನ್ನು ನೇಮಿಸಿತ್ತು.
ತನ್ನ ಒಪ್ಪಿಗೆ ಪಡೆಯದೆ ಕೈಗೊಳ್ಳಲಾಗಿದ್ದ ಈ ಕ್ರಮವನ್ನು ಭಾರತ ಆಕ್ಷೇಪಿಸಿತ್ತು.
ಸದ್ಯ ಜಾಧವ್ ಪ್ರಕರಣದ ವಿಚಾರಣೆ ಸೆಪ್ಟಂಬರ್‌ವರೆಗೆ ಮುಂದೂಡಲ್ಪಟ್ಟಿದೆ. ಅಷ್ಟರಲ್ಲಿ ಅವರ ಪರವಾಗಿ ವಾದ ಮಂಡಿಸಲು ಭಾರತೀಯ ನ್ಯಾಯವಾದಿ ಅಥವಾ ಕಾನೂನು ಸಲಹೆಗಾರರ ತಂಡವನ್ನು ನೇಮಿಸಬೇಕಿದ್ದು, ಅದಕ್ಕೆ ಪಾಕ್ ಅನುಮತಿ ಬೇಕಿದೆ.
ಅದನ್ನು ನೀಡಲು ಮೀನ ಮೇಷ ಎಣಿಸುತ್ತಿದ್ದುದರಿಂದ ಇಸ್ಲಾಮಾಬಾದ್ ಹೈಕೋರ್ಟ್ ಈ ಸೂಚನೆ ನೀಡಿದೆ.
ನ್ಯಾಯಾಲಯದ ಆದೇಶ ಹೊರಬಿದ್ದ 60 ದಿನಗಳ ಒಳಗಾಗಿ ಜಾಧವ್ ಅವರು ಭಾರತದಿಂದ ನೇಮಿಸಲ್ಪಡುವ ವಕೀಲರ ಮೂಲಕ ಪಾಕ್ ಸೇನಾ ನ್ಯಾಯಾಲಯ ತನ್ನ ವಿರುದ್ಧ ನೀಡಿರುವ ಶಿಕ್ಷೆಯ ಮರುಪರಿಶೀಲನ ಅರ್ಜಿಯನ್ನು ದಾಖಲಿಸಬಹುದಾಗಿದೆ.