ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಸ್ಲಿಂ ದೇಶಗಳ ವಲಸೆ ನಿಷೇಧದ ಪಟ್ಟಿಗೆ ಶೀಘ್ರವೇ ಪಾಕಿಸ್ಥಾನವನ್ನು ಸೇರಿಸಲಾಗುವುದು ಎಂದು ತಿಳಿದು ಬಂದಿದೆ.
ಟ್ರಂಪ್ ಅವರು ಕಳೆದ ಶುಕ್ರವಾರ ಪ್ರಕಟಿಸಿದ್ದ ವಲಸೆ ನಿಷೇಧ ಪಟ್ಟಿಯಲ್ಲಿ ಸಿರಿಯಾ, ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ಇದ್ದವು. ಪಾಕಿಸ್ಥಾನವನ್ನು ಈ ಪಟ್ಟಿಗೆ ಅಂದೇ ಸೇರಿಸುವುದಿತ್ತು. ಆದರೆ ಈಗಿನ್ನು ಶೀಘ್ರವೇ ಪಾಕಿಸ್ಥಾನವನ್ನು ಸೇರಿಸಲಾಗುವುದು ಎಂಬ ಸುಳಿವನ್ನು ಶ್ವೇತಭವನ ನೀಡಿದೆ.
ಶ್ವೇತ ಭವನದ ಸಿಬಂದಿ ಮುಖ್ಯಸ್ಥ ರೀನ್ಸ್ ಪ್ರೀಬಸ್ ಅವರು “ವಲಸಿಗರು, ನಿರಾಶ್ರಿತರು, ಗ್ರೀನ್ ಕಾರ್ಡ್ ಹೊಂದಿರುವವರು ಮುಂತಾಗಿ ಏಳು ಮುಸ್ಲಿಂ ದೇಶಗಳ ವಲಸಿಗರು ಅಮೆರಿಕಕ್ಕೆ ಹರಿದು ಬರುವುದನ್ನು ನಿಯಂತ್ರಿಸುವುದು ಈ ನಿಷೇಧ ಕ್ರಮದ ಉದ್ದೇಶವಾಗಿದೆ’ ಎಂದು ಸ್ಪಷ್ಟಪಡಿಸಿದರು.
ಅತ್ಯಂತ ಅಪಾಯಕಾರಿ ಭಯೋತ್ಪಾದನೆ ಕೃತ್ಯಗಳು ನಡೆಯುತ್ತಿರುವ ಏಳು ಮುಸ್ಲಿಂ ದೇಶಗಳನ್ನು ಈ ಹಿಂದೆಯೇ ಒಬಾಮಾ ಆಡಳಿತ ಮತ್ತು ಅಮೆರಿಕ ಸಂಸತ್ತು ಗುರುತಿಸಿದ್ದು ಆ ದೇಶಗಳಿಂದ ಅಮೆರಿಕಕ್ಕೆ ವಲಸೆ ಬರುವ ನಿರಾಶ್ರಿತರು ಹಾಗೂ ವಲಸಿಗರನ್ನು ನಿಯಂತ್ರಿಸುವ ಯೋಜನೆ ಮೊದಲೇ ಇತ್ತು; ಅದೇ ಯೋಜನೆಯನ್ನು ಈಗ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ ಎಂದು ಪ್ರೀಬಸ್ ಹೇಳಿರುವುದನ್ನು ಸಿಬಿಸಿ ನ್ಯೂಸ್ ವರದಿ ಮಾಡಿದೆ.
ಏಳು ನಿಷೇಧಿತ ದೇಶಗಳೊಂದಿಗೆ ಈಗಿನ್ನು ಸದ್ಯದಲ್ಲೇ ಪಾಕಿಸ್ಥಾನವನ್ನೂ ಸೇರಿಸುವ ಆಲೋಚನೆ ಶ್ವೇತಭವನಕ್ಕೆ ಇದೆ ಎಂಬ ಸುಳಿವನ್ನೂ ಪ್ರೀಬಸ್ ಈ ಸಂದರ್ಭದಲ್ಲಿ ನೀಡಿದರು.
ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಿಂದ ಅಮೆರಿಕಕ್ಕೆ ವಲಸೆ ಬರುತ್ತಿರುವವರ ಮೇಲೆ ಈಗ ತೀವ್ರ ಕಣ್ಗಾವಲು, ಕಟ್ಟೆಚ್ಚರ ಮತ್ತು ನಿರ್ಬಂಧದ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದವರು ಹೇಳಿದರು.