ನವದೆಹಲಿ:ಜಮ್ಮು-ಕಾಶ್ಮೀರದ ಹಿರಾನಗರ್ ಸೆಕ್ಟರ್ ಪ್ರದೇಶದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನಾಪಡೆ ಭಾರೀ ಪ್ರಮಾಣದ ಶೆಲ್ ದಾಳಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸೇನೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ಕದನ ವಿರಾಮ ಉಲ್ಲಂಘಿಸಿ ಪಾಕ್ ಪಡೆ ನಡೆಸಿದ ದಾಳಿಗೆ ಭಾರತದ ಸೇನಾಪಡೆ ತಕ್ಕ ಪ್ರತ್ಯುತ್ತರ ನೀಡಿದ್ದು, ಭಾರೀ ಗುಂಡಿನ ಕಾಳಗದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಭಾರೀ ಆತಂಕಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಹಿರಾನಗರ್ ಪ್ರದೇಶದಲ್ಲಿ ಪಾಕಿಸ್ತಾನ ಪಡೆಗಳು ಸತತವಾಗಿ 12ಗಂಟೆಗಳ ಕಾಲ ದಾಳಿ ನಡೆಸಿರುವುದಾಗಿ ಭಾರತೀಯ ಸೇನಾ ತಿಳಿಸಿದೆ. ರಾತ್ರಿ 10.30ಕ್ಕೆ ದಾಳಿ ಆರಂಭಿಸಿದ್ದ ಪಾಕ್ ಪಡೆಗಳು ಸತತವಾಗಿ ದಾಳಿ ನಡೆಸಿರುವುದಾಗಿ ಹೇಳಿದೆ.
ಹಿರಾನಗರ್ ಸೆಕ್ಟರ್ ಪ್ರದೇಶದಲ್ಲಿ ಪಾಕಿಸ್ತಾನ ಪಡೆಗಳು ಕಳೆದ 15 ದಿನಗಳಿಂದ ನಿರಂತರವಾಗಿ ಶೆಲ್ ಹಾಗೂ ಮೋರ್ಟಾರ್ ದಾಳಿ ನಡೆಸುತ್ತಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ನಿರಂತರ ದಾಳಿಯಿಂದಾಗಿ ಸ್ಥಳೀಯ ನಿವಾಸಿಗಳು ಭಯದಲ್ಲಿಯೇ ಬದುಕುವಂತಾಗಿದೆ. ಘಟನೆಯಲ್ಲಿ ಯಾವುದೇ ಸಾವು, ನೋವಿನ ಬಗ್ಗೆ ಈವರೆಗೆ ವರದಿಯಾಗಿಲ್ಲ.
ಅಕ್ಟೋಬರ್ 3ರಂದು ಪೂಂಜ್ ಜಿಲ್ಲೆಯ ಶಾಪುರ್ ಮತ್ತು ಕೆರ್ನಿ ಸೆಕ್ಟರ್ ಪ್ರದೇಶದಲ್ಲಿ ಪಾಕ್ ಪಡೆ ನಡೆಸಿದ ದಾಳಿಯಲ್ಲಿ ಓರ್ವ ನಾಗರಿಕ ಗಾಯಗೊಂಡಿದ್ದರು ಎಂದು ವರದಿ ಹೇಳಿದೆ.