Advertisement

ಲಾಹೋರ್‌ನಲ್ಲೂ ಪಾಕ್‌ ಪರಾಕ್ರಮ

06:25 AM Oct 31, 2017 | |

ಲಾಹೋರ್‌: ಎಂಟು ವರ್ಷಗಳ ಹಿಂದೆ ಕ್ರಿಕೆಟ್‌ ದುರಂತವೊಂದಕ್ಕೆ ಸಾಕ್ಷಿಯಾದ ಲಾಹೋರ್‌ನಲ್ಲಿ ನಿರ್ವಿಘ್ನವಾಗಿ ಟಿ20 ಪಂದ್ಯವೊಂದು ನಡೆದಿದೆ. ಆದರೆ ಅಂದು ಭಯೋತ್ಪಾದಕ ದಾಳಿಗೊಳಗಾದ ಶ್ರೀಲಂಕಾ ತಂಡ ಮಾತ್ರ ಈ ಪಂದ್ಯವನ್ನೂ ಕಳೆದುಕೊಂಡು 3-0 ಕ್ಲೀನ್‌ ಸ್ವೀಪ್‌ ದುರಂತಕ್ಕೆ ಸಿಲುಕಿದೆ.

Advertisement

ಇಲ್ಲಿನ “ಗದ್ದಾಫಿ ಸ್ಟೇಡಿಯಂ’ನಲ್ಲಿ ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಪಾಕಿಸ್ಥಾನ 36 ರನ್ನುಗಳ ಜಯ ಸಾಧಿಸಿತು. ತವರಿನ ಅಪರೂಪದ ಅಂತಾರಾಷ್ಟ್ರೀಯ ಪಂದ್ಯವನ್ನು ಕಾಣಲು ಕಿಕ್ಕಿರಿದು ನೆರೆದಿದ್ದ ವೀಕ್ಷಕರ ಸಮ್ಮುಖದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ಥಾನ 3 ವಿಕೆಟಿಗೆ 180 ರನ್‌ ಪೇರಿಸಿ ಸವಾಲೊಡ್ಡಿದರೆ, ಶ್ರೀಲಂಕಾ 9ಕ್ಕೆ 144 ರನ್‌ ಗಳಿಸಿ ಶರಣಾಯಿತು. ಸರಣಿಯ ಮೊದಲೆರಡು ಪಂದ್ಯ ಅಬುದಾಭಿಯಲ್ಲಿ ನಡೆದಿತ್ತು. 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡ ಶ್ರೀಲಂಕಾ ಅನಂತರ ಸತತವಾಗಿ ಸೋಲನ್ನೇ ಕಾಣುತ್ತ ಬಂದಿತ್ತು. ಇದಕ್ಕೂ ಹಿಂದಿನ ಏಕದಿನ ಸರಣಿಯನ್ನೂ ಪಾಕ್‌ 5-0 ಅಂತರದಿಂದ ಗೆದ್ದಿತ್ತು.

ಮಲಿಕ್‌ ಮಿಂಚಿನ ಆಟ
ಪಾಕಿಸ್ಥಾನದ ದೊಡ್ಡ ಮೊತ್ತಕ್ಕೆ ಕಾರಣವಾದದ್ದು ಶೋಯಿಬ್‌ ಮಲಿಕ್‌ ಅವರ ಬಿರುಸಿನ ಬ್ಯಾಟಿಂಗ್‌. 4ನೇ ಕ್ರಮಾಂಕದಲ್ಲಿ ಆಡಲಿಳಿದ ಮಲಿಕ್‌ ಕೇವಲ 24 ಎಸೆತಗಳಿಂದ 51 ರನ್‌ ಸಿಡಿಸಿದರು (5 ಬೌಂಡರಿ, 2 ಸಿಕ್ಸರ್‌). ಫ‌ಕರ್‌ ಜಮಾನ್‌ (31) ಮತ್ತು ಉಮರ್‌ ಅಮಿನ್‌ (45) ಮೊದಲ ವಿಕೆಟಿಗೆ 8 ಓವರ್‌ಗಳಿಂದ 57 ರನ್‌ ಪೇರಿಸಿದರು. ಬಾಬರ್‌ ಆಜಂ ಗಳಿಕೆ ಅಜೇಯ 34 ರನ್‌. ಪಾಕ್‌ ಬ್ಯಾಟಿಂಗಿಗೆ ಕಡಿವಾಣ ಹಾಕಲು ಲಂಕಾ 8 ಮಂದಿಯನ್ನು ದಾಳಿಗಿಳಿಸಿತಾದರೂ ಯಶಸ್ಸು ಕಾಣಲಿಲ್ಲ.

4 ಓವರ್‌ ಆಗುವಷ್ಟರಲ್ಲಿ 21 ರನ್ನಿಗೆ 3 ವಿಕೆಟ್‌ ಉದುರಿಸಿಕೊಂಡ ಶ್ರೀಲಂಕಾವನ್ನು ದಸುನ್‌ ಶಣಕ (51) ಮೇಲೆತ್ತುವ ಪ್ರಯತ್ನ ಮಾಡಿದರೂ ಇವರದು ಏಕಾಂಗಿ ಹೋರಾಟವೆನಿಸಿತು. ಚತುರಂಗ ಡಿ ಸಿಲ್ವ 21 ರನ್‌ ಮಾಡಿದರು. ವೇಗಿ ಮೊಹಮ್ಮದ್‌ ಆಮಿರ್‌ 13 ರನ್ನಿಗೆ 4 ವಿಕೆಟ್‌ ಹಾರಿಸಿ ಘಾತಕವಾಗಿ ಪರಿಣಮಿಸಿದರು.

ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗಳೆರಡು ಶೋಯಿಬ್‌ ಮಲಿಕ್‌ ಪಾಲಾದವು.

Advertisement

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-3 ವಿಕೆಟಿಗೆ 180 (ಮಲಿಕ್‌ 51, ಅಮಿನ್‌ 45, ಬಾಬರ್‌ 34, ಮುನವೀರ 26ಕ್ಕೆ 1). ಶ್ರೀಲಂಕಾ-9 ವಿಕೆಟಿಗೆ 144 (ಶಣಕ 54, ಚತುರಂಗ 21, ಆಮಿರ್‌ 13ಕ್ಕೆ 4, ಅಶ್ರಫ್ 19ಕ್ಕೆ 2).
 
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ:
ಶೋಯಿಬ್‌ ಮಲಿಕ್‌.

Advertisement

Udayavani is now on Telegram. Click here to join our channel and stay updated with the latest news.

Next