ಇಸ್ಲಾಮಾಬಾದ್ : ದಕ್ಷಿಣ ಏಶ್ಯ ವ್ಯೂಹಗಾರಿಕೆಗೆ ಬೆಂಬಲವಾಗಿ ಪಾಕಿಸ್ಥಾನ ಯಾವುದೇ ನಿರ್ಣಾಯಕ ಕ್ರಮ ತೆಗೆದುಕೊಳ್ಳದಿರುವ ಕಾರಣ 300 ದಶಲಕ್ಷ ಡಾಲರ್ ಸಮ್ಮಿಶ್ರ ಬೆಂಬಲ ನಿಧಿಯ ಮರು ಹೊಂದಾಣಿಕೆಗೆ ತಾನು ಸಂಸತ್ತಿನ ಅನುಮೋದನೆ ಕೋರಿರುವುದಾಗಿ ಪೆಂಟಗನ್ ಹೇಳಿದ ಬೆನ್ನಿಗೇ ಪಾಕಿಸ್ಥಾನ ತನ್ನನ್ನು ತಾನು ಸಮರ್ಥಿಸಿಕೊಂಡಿದೆ.
ಅಮೆರಿಕವು ಪಾಕಿಸ್ಥಾನಕೆ ಕೊಡಬೇಕಿರುವ 300 ದಶಲಕ್ಷ ಡಾಲರ್, ನೆರವು ಮೊತ್ತ ಅಲ್ಲ; ಬದಲು ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಪಾಕಿಸ್ಥಾನ ಭರಿಸಿರುವ ಖರ್ಚು ವೆಚ್ಚಗಳ ಮರುಪಾವತಿ ಮೊತ್ತವೇ ಆಗಿದೆ ಎಂದು ಪಾಕ್ ವಿದೇಶ ಸಚಿವ ಶಾ ಮೆಹಮೂದ್ ಕುರೇಶಿ ಹೇಳಿದ್ದಾರೆ.
“ಅಮೆರಿಕದ ನೆರವಿನಲ್ಲಿ ಕಡಿತವಾಗುವ ಮೊತ್ತ ಇದಲ್ಲ ಅಥವಾ ಇದು ನೆರವು ಮೊತ್ತವೂ ಅಲ್ಲ; ಇದು ನಮ್ಮದೇ ಹಣ; ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ನಾವು ಭರಿಸಿರುವ ಖರ್ಚು ವೆಚ್ಚಗಳನ್ನು ಅಮೆರಿಕ ನಮಗೆ ಮರುಪಾವತಿಸಬೇಕಿರುವ ಮೊತ್ತ ಇದಾಗಿದೆ’ ಎಂದು ಕುರೇಶಿ ಹೇಳಿದರು.
ಅಮೆರಿಕವು ಸಿಎಸ್‌ಎಫ್ ಅಮಾನತು ಪರಿಗಣಿಸಿದಲ್ಲಿ ಅದರಿಂದ ಪಾಕ್ -ಅಮೆರಿಕ ಸಂಬಂಧ ಇನ್ನಷ್ಟು ಹಳಸುವ ಸಾಧ್ಯತೆ ಇದೆ. ಅಮೆರಿಕದ ವಿದೇಶ ಸಚಿವ ಮೈಕ್ ಪಾಂಪಿಯೋ ಅವರು ಇಸ್ಲಾಮಾಬಾದ್‌ಗೆ ಭೇಟಿ ನೀಡುವ ಮುನ್ನವೇ ಅಮೆರಿಕ ಪಾಕಿಸ್ಥಾನಕ್ಕೆ ಕೊಡಬೇಕಿರುವ ಮೊತ್ತವನ್ನು ತಡೆಹಿಡಿಯುವುದರಿಂದ ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಅಡಚಣೆ ಉಂಟಾಗಲಿದೆ ಎಂದು ಕುರೇಶಿ ಹೇಳಿದರು.
ಅಮೆರಿಕ ವಿದೇಶ ಸಚಿವ ಮೈಕ್ ಪಾಂಪಿಯೋ ಅವರು ಇಸ್ಲಾಮಾಬಾದ್‌ಗೆ ಬಂದಾಗ ನಾವು ಈ ವಿಷಯವನ್ನು ಅವರಲ್ಲಿ ಎತ್ತುವೆವು ಎಂದು ಕುರೇಶಿ ಹೇಳಿದರು.