ಇಸ್ಲಾಮಾಬಾದ್ : ಉಗ್ರ ಸಂಘಟನೆಗಳಿಗೆ ಮತ್ತು ವ್ಯಕ್ತಿಗಳಿಗೆ ಹಣಕಾಸು ನೆರವು ನೀಡುವುದನ್ನು ಮುಂದುವರಿಸುತ್ತಿರುವ ಪಾಕಿಸ್ಥಾನದ ಅದೃಷ್ಟ ಬೇಗನೆ ಕೊನೆಗೊಳ್ಳುವ ಸೂಚನೆಗಳು ಲಭಿಸುತ್ತಿವೆ.
ಅಂತಾರಾಷ್ಟ್ರೀಯ ಹಣಕಾಸು ಅಕ್ರಮಗಳ ಮೇಲೆ ಕಣ್ಗಾವಲು ಇರಿಸುವ ಸಂಸ್ಥೆಯೊಂದು ಪಾಕಿಸ್ಥಾನವನ್ನು ಇದೇ ವರ್ಷ ಜೂನ್ ಒಳಗಾಗಿ ಕಪ್ಪು ಪಟ್ಟಿಗೆ ಸೇರಿಸಲಿದೆ.
ಭಯೋತ್ಪಾದನೆಗೆ ಹಣ ಒದಗಿಸುವುದನ್ನು ನಿಲ್ಲಿಸುವ ಬಗ್ಗೆ ಪಾಕಿಸ್ಥಾನ ಸಮಗ್ರ ಯೋಜನೆಯೊಂದನ್ನು ರೂಪಿಸಿ ಸಲ್ಲಿಸದಿದ್ದಲ್ಲಿ ಅದು ಬೇಗನೆ ತನ್ನನ್ನು ಕಪ್ಪು ಪಟ್ಟಿಯಲ್ಲಿ ಕಾಣಲಿದೆ ಎಂದು ಜಾಗತಿಕ ಹಣಕಾಸು ಅಕ್ರಮ ನಿಗಾವಣೆ ಸಂಸ್ಥೆ ಎಚ್ಚರಿಕೆ ನೀಡಿದೆ. ಪಾಕ್ ದೈನಿಕ ಡಾನ್ ಈ ವಿಷಯವನ್ನು ವರದಿ ಮಾಡಿದೆ.
ಕಳೆದ ವಾರವಷ್ಟೇ 37 ದೇಶಗಳ ಹಣಕಾಸು ಕಾರ್ಯ ಪಡೆ (ಎಫ್ಎಟಿಎಫ್) ಪಾಕಿಸ್ಥಾನವನ್ನು “ಗ್ರೇ ಲಿಸ್ಟ್’ ಸೇರಿಸಿತ್ತು; ಆಗ ಪಾಕ್ ಬ್ಲ್ಯಾಕ್ ಲಿಸ್ಟ್ ಗೆ ಸೇರ್ಪಡೆಗೊಳ್ಳುವುದು ಸ್ವಲ್ಪದರಲ್ಲೇ ತಪ್ಪಿತ್ತು.
ಆದರೆ ಪಾಕಿಸ್ಥಾನ ತನ್ನಲ್ಲಿನ ಉಗ್ರ ಸಂಘಟನೆಗಳಿಗೆ ಮತ್ತು ಉಗ್ರ ನಾಯಕರಿಗೆ ಹಣಕಾಸು ನೆರವು ನೀಡುವುದನ್ನು ಇನ್ನೂ ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ತನ್ನ ಸಮಗ್ರ ಯೋಜನೆಯನ್ನು ಪಾಕಿಸ್ಥಾನ ಈ ಕೂಡಲೇ ಸಲ್ಲಿಸಬೇಕಿದೆ; ಇಲ್ಲವಾದಲ್ಲಿ ಅದು ಜೂನ್ ಒಳಗಾಗಿ ಬ್ಲ್ಯಾಕ್ ಲಿಸ್ಟ್‌ಗೆ ಸೇರುವುದು ನಿಶ್ಚಿತ ಎಂಬ ಎಚ್ಚರಿಕೆಯನ್ನು ನೀಡಲಾಗಿರುವುದಾಗಿ ಡಾನ್ ವರದಿ ಮಾಡಿದೆ.