ಇಸ್ಲಾಮಾಬಾದ್ : ದಿವಾಳಿ ಅಂಚಿಗೆ ತಲುಪಿರುವ ಪಾಕಿಸ್ಥಾನದ ಆರ್ಥಿಕತೆಯನ್ನು ಮತ್ತೆ ಪ್ರಗತಿ ಪಥಕ್ಕೆ ತರುವ ತನ್ನ ಚುನಾವಣಾ ಪೂರ್ವ ಆಶ್ವಾಸನೆಗೆ ಅನುಗುಣವಾಗಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ನೂತನ ಸಚಿವ ಸಂಪುಟ ಹಲವು ರೀತಿಯ ಮಿತ ವ್ಯಯದ ಕ್ರಮಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ ದೇಶದ ಅಧ್ಯಕ್ಷರು, ಪ್ರಧಾನಿ, ಸರಕಾರದ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ಮೊದಲ ದರ್ಜೆಯ ವಿಮಾನ ಯಾನವನ್ನು ಸಂಪುಟ ನಿಷೇಧಿಸಿದೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ , ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ನಡೆದಿರುವ ಎರಡನೇ ಸಚಿವ ಸಂಪುಟ ಸಭೆಯಲ್ಲಿ, ಸರಕಾರಿ ಮುಖ್ಯಸ್ಥರ, ಉನ್ನತಾಧಿಕಾರಿಗಳ ಮೊದಲ ದರ್ಜೆ ವಿಮಾನ ಪ್ರಯಾಣಕ್ಕೆ ಕತ್ತರಿ ಹಾಕಲಾಗಿದೆ. ಮಾತ್ರವಲ್ಲದೆ ಪಾಕ್ ಉನ್ನತಾಧಿಕಾರಿಗಳು ಕಾರ್ಯ ವೇಳಾ ಪಟ್ಟಿಯನ್ನು ಕೂಡ ಸರಕಾರ ಪರಿಷ್ಕರಿಸಿದ್ದು ಹೆಚ್ಚು ಹೊತ್ತು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಇದರ ಪರಿಣಾಮವಾಗಿ ಇನ್ನು ಮುಂದೆ ಪಾಕ್ ಪ್ರಧಾನಿ, ವರಿಷ್ಠ ನ್ಯಾಯಮೂರ್ತಿ, ಸೆನೆಟ್ ಅಧ್ಯಕ್ಷರು, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಮತ್ತು ಮುಖ್ಯ ಮಂತ್ರಿಗಳು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯಲ್ಲಿ ಪ್ರಯಾಣಿಸುವಂತಿಲ್ಲ. ಮತ್ತು ಅವರು ಇನ್ನು ಮುಂದೆ ಬ್ಯುಸಿನೆಸ್ ಅಥವಾ ಕ್ಲಬ್ ಕ್ಲಾಸ್ ಗಳಲ್ಲಿ ಮಾತ್ರವೇ ಪ್ರಯಾಣಿಸಬೇಕಾಗುತ್ತದೆ ಎಂದು ಡಾನ್ ದೈನಿಕ ವರದಿ ಮಾಡಿದೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ನೂತನ ಪಾಕ್ ಸರಕಾರದ ಈ ನಿರ್ಧಾರಕ್ಕೆ ಕಾರಣವಾಗಿರುವ ಮುಖ್ಯ ಸಂಗತಿ ಎಂದರೆ ಪಾಕಿಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯ ಪ್ರಯಾಣಕ್ಕೆ ಇತರ ದರ್ಜೆಗಳಿಗಿಂತ 300 ಪಟ್ಟು ಅಧಿಕ ಶುಲ್ಕ ಇದೆ.
ಇಮ್ರಾನ್ ಅವರು ಸ್ವತಃ ತಾನು ಇನ್ನು ಮುಂದೆ ವಿದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ತನ್ನ ವಿಶೇಷ ವಿಮಾನವನ್ನು ಬಳಸದೆ, ನಿತ್ಯ ಹಾರಾಟಕ್ಕೆ ಲಭ್ಯವಿರುವ ವಿಮಾನಗಳಲ್ಲಿನ ಬ್ಯುಸಿನೆಸ್ ಕ್ಲಾಸ್ ಅಥವಾ ಕ್ಲಬ್ ಕ್ಲಾಸ್ ನಲ್ಲಿ ಮಾತ್ರವೇ ಪ್ರಯಾಣಿಸುವುದಾಗಿ ಹೇಳಿದ್ದಾರೆ.