ಇಸ್ಲಾಮಾಬಾದ್ : ರಾಜಧಾನಿ ಇಸ್ಲಾಮಾಬಾದ್ ತಲುಪುವ ಮುಖ್ಯ ಹೆದ್ದಾರಿಯನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದ ಇಸ್ಲಾಮಿಕ್ ಪ್ರತಿಭಟನಕಾರರನ್ನು ತೆರವುಗೊಳಿಸುವ ಪಾಕ್ ಛಾಯಾ ಸೇನೆ ಮತ್ತು ಪೊಲೀಸರ ಬಿಗಿ ಜಂಟಿ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬಂದಿಗಳ ಸಹಿತ ಸುಮಾರು 70 ಮಂದಿ ಗಾಯಗೊಂಡಿದ್ದು ಪಾಕ್ ರಾಜಧಾನಿ ವಸ್ತುತಃ ಹೊತ್ತಿ ಉರಿಯುತ್ತಿದೆ.
ಇಸ್ಲಾಮಿಕ್ ಪ್ರತಿಭಟನಕಾರರ ವಿರುದ್ಧ ಛಾಯಾ ಸೇನೆ ಮತ್ತು ಪೊಲೀಸರು ಬಿಗು ಕಾರ್ಯಾಚರಣೆಗೊಳ್ಳುತ್ತಿರುವ ಕಾರಣ ಪಾಕಿಸ್ಥಾನದಲ್ಲಿನ ಖಾಸಗಿ ಟಿವಿ ವಾಹಿನಿಗಳು ತಮ್ಮ ಪ್ರಸಾರ ಕಾರ್ಯವನ್ನು ಬಂದ್ ಮಾಡುವಂತೆ ಪಾಕ್ ಸರಕಾರ ಆದೇಶಿಸಿದೆ.
ಪಾಕ್ ಖಾಸಗಿ ಟಿವಿ ಮಾಧ್ಯಮಗಳು ನಿರ್ಬಂಧದ ಹೊರತಾಗಿಯೂ ಇಸ್ಲಾಮಿಕ್ ಪ್ರತಿಭಟನಕಾರರ ವಿರುದ್ಧದ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡುತ್ತಿರುವ ಕಾರಣ ಅವುಗಳಿಗೆ ಸದ್ಯಕ್ಕೆ ಕಡ್ಡಾಯವಾಗಿ ಪ್ರಸಾರ ಕಾರ್ಯ ನಿಲ್ಲಿಸುವಂತೆ ಪಾಕಿಸ್ಥಾನದ ವಿದ್ಯುನ್ಮಾನ ನಿಯಂತ್ರಣ ಪ್ರಾಧಿಕಾರ ಆದೇಶಿಸಿರುವುದಾಗಿ ವರದಿಗಳು ತಿಳಿಸಿವೆ.
ಈ ನಡುವೆ ಪಾಕ್ ಸರಕಾರಿ ಒಡೆತನದ ಟಿವಿ ತನ್ನ ಪ್ರಸಾರ ಕಾರ್ಯ ಮುಂದುವರಿಸಿದೆಯಾದರೂ ಅದು ದೇಶದ ಹಾಲಿ ರಾಜಕೀಯ ಸ್ಥಿತಿಗತಿ ಕುರಿತ ಚರ್ಚೆಯನ್ನು ಮಾತ್ರವೇ ಪ್ರಸಾರಿಸುತ್ತಿದೆ.
Related Articles
ಇಸ್ಲಾಮಿಕ್ ಪ್ರತಿಭಟನಕಾರರನ್ನು ಇಸ್ಲಾಮಾಬಾದ್ ತಲುಪುವ ಮುಖ್ಯ ಹೆದ್ದಾರಿಯಿಂದ ತೆರವುಗೊಳಿಸುವ ಭದ್ರತಾ ಪಡೆಗಳ ಇಂದಿನ ಕಾರ್ಯಾಚರಣೆಯಲ್ಲಿ ರಬ್ಬರ್ ಬುಲೆಟ್‌ಗಳನ್ನು ಬಳಸಲಾಗಿದ್ದು ಇದು ಪ್ರತಿಭಟನಕಾರರಲ್ಲಿ ಆಕ್ರೋಶ, ಕ್ಷೋಭೆ ಉಂಟು ಮಾಡಿದೆ.
ಕಳೆದ ಸೆಪ್ಟಂಬರ್‌ನಲ್ಲಿ ಪಾಸಾಗಿರುವ 2017ರ ಚುನಾವಣಾ ಕಾಯಿದೆಯಲ್ಲಿ ಪ್ರವಾದಿತ್ವದ ಅಂತಿಮ ಪ್ರಮಾಣಕ್ಕೆ (ಖತ್‌ಮ್-ಇ-ನಬೂವ್ವತ್) ಬದಲಾವಣೆಗಳನ್ನು ಮಾಡಲಾಗಿರುವ ಕಾರಣಕ್ಕೆ ಕಾನೂನು ಸಚಿವ ಝಾಹೀದ್ ಹಮೀದ್ ತಮ್ಮ ಸಚಿವಪದಕ್ಕೆ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟಕಾರರ ಆಗ್ರಹವಾಗಿದೆ.
ಭದ್ರತಾ ಅಧಿಕಾರಿಗಳ ನೀಡಿರುವ ಮಾಹಿತಿಯ ಪ್ರಕಾರ ಸುಮಾರು 2,000 ಇಸ್ಲಾಮಿಕ್ ಪ್ರತಿಭಟನಕಾರರನ್ನು ತೆರವು ಗೊಳಿಸುವ ಕಾರ್ಯಾಚರಣೆಯಲ್ಲಿ 8,000 ಭದ್ರತಾ ಸಿಂಬಂದಿಗಳು ಭಾಗವಹಿಸಿದ್ದಾರೆ. ಈ ವರದಿ ಬಂದ ಸಂದರ್ಭದಲ್ಲೂ ಭದ್ರತಾ ಪಡೆಗಳ ಕಾರ್ಯಾಚರಣೆ ಜಾರಿಯಲ್ಲಿತ್ತು. ಪ್ರತಿಭಟನಕಾರರರ ಉಗ್ರ ಪ್ರತಿರೋಧ ಮುಂದುವರಿದಿತ್ತು.