ಹೊಸದಿಲ್ಲಿ : ಪಾಕಿಸ್ಥಾನದ ಸಂಗ್ರಹದಲ್ಲೀಗ ಸುಮಾರು 140 ಮನುಕುಲ ವಿನಾಶಕ ಅಣ್ವಸ್ತ್ರಗಳಿವೆ. ಇವುಗಳನ್ನು ಸುರಕ್ಷಿತವಾಗಿಡಲು ಅದು ಹೊಸದಿಲ್ಲಿಯಿಂದ ಕೇವಲ 750 ಕಿ.ಮೀ. ದೂರ ಹಾಗೂ ಅಮೃತಸರದಿಂದ 350 ಕಿ.ಮೀ. ದೂರದಲ್ಲಿನ ಮಿಯಾನ್‌ವಾಲಿ ಎಂಬಲ್ಲಿ ಮೂರು ಭೂಗತ ಸುರಂಗಗಳನ್ನು ನಿರ್ಮಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
10 ಮೀಟರ್ ಎತ್ತರ ಹಾಗೂ 10 ಮೀಟರ್ ಅಗಲದ ಈ ಮೂರು ಸುರಂಗಗಳನ್ನು ಪರಸ್ಪರ ಸಂಪರ್ಕಿಸುವ ವ್ಯವಸ್ಥೆಯನ್ನೂ ಹೊಂದಿವೆ.
ಈ ಸುರಂಗಗಳನ್ನು ತಲುಪುವುದಕ್ಕೆ ಅಗಲವಾದ ರಸ್ತೆಗಳನ್ನು ನಿರ್ಮಿಸಲಾಗಿದ್ದು ಅಣ್ವಸ್ತ್ರಗಳನ್ನು ಸುರಂಗಗಳಿಂದ ಹೊರ ತಂದು ಅವುಗಳನ್ನು ಬೇಕಾದೆಡೆಗೆ ಸಾಗಿಸುವುದಕ್ಕೆ ಈ ರಸ್ತೆಗಳು ನಿರ್ಣಾಯಕ ಪಾತ್ರವಹಿಸಲಿವೆ.
ಈ ಎಲ್ಲ ಮೂರು ಸುರಂಗಗಳು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿವೆ. ಈ ಸುರಂಗಗಳಲ್ಲಿ ಕನಿಷ್ಠ 12ರಿಂದ 24ರಷ್ಟು ಅಣ್ವಸ್ತ್ರಗಳನ್ನು ದಾಸ್ತಾನು ಇಡಬಹುದಾಗಿದೆ ಎಂದು ವರದಿಗಳು ತಿಳಿಸಿವೆ.
ಅಣ್ವಸ್ತ್ರಗಳನ್ನು ಸಂಗ್ರಹಿಸಿಡಲಾಗುವ ಈ ಸುರಂಗಗಳು ಇರುವ ಪ್ರದೇಶಕ್ಕೆ ಮುಳ್ಳುತಂತಿ ಬೇಲಿಯನ್ನು ಹಾಕಲಾಗಿದೆ ಮತ್ತು ಆ ಮೂಲಕ ಯಾರೂ ಈ ಪ್ರದೇಶವನ್ನು ಪ್ರವೇಶಿಸದಂತೆ ಮತ್ತು ಅದಕ್ಕೆ ಹಾನಿ ಉಂಟುಮಾಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.