ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಶನಿವಾರ(ಜೂನ್ 26) ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಪಾಕಿಸ್ತಾನ ಮೂಲದ ಐಎಸ್ ಐ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದ್ದಿರುವುದಾಗಿ ಅಧಿಕಾರಿಗಳ ಮೂಲ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ:ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 1.28 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳ ನಾಶ
ರೈತರ ಪ್ರತಿಭಟನೆಯನ್ನು ಪಾಕಿಸ್ತಾನ ಮೂಲದ ಐಎಸ್ ಐ ಹೈಜಾಕ್ ಮಾಡುವ ಮೂಲಕ ಸಂಚು ನಡೆಸಬಹುದು ಎಂಬ ಬೆದರಿಕೆಯ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ, ದೆಹಲಿ ಪೊಲೀಸರು ಮತ್ತು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಪಡೆ(ಸಿಐಎಸ್ ಎಫ್)ಗೆ ಮುನ್ನೆಚ್ಚರಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ನಿರಂತರವಾಗಿ ನಡೆಸುತ್ತಿದ್ದ ಪ್ರತಿಭಟನೆ ಏಳು ತಿಂಗಳು ಕಾಲ ಪೂರೈಸಿದ ನಿಟ್ಟಿನಲ್ಲಿ ರೈತ ಸಂಘಟನೆಗಳು ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ವರದಿ ತಿಳಿಸಿದೆ.
ಸಂದೇಶದ ನಂತರ ದೆಹಲಿ ಪೊಲೀಸರು ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಂಡಿದ್ದಾರೆ. ದೆಹಲಿ ಮೆಟ್ರೋ ರೈಲು ನಿಗಮ ಕೂಡಾ ಶುಕ್ರವಾರ ಹೊರಡಿಸಿರುವ ಪ್ರಕಟಣೆಯಲ್ಲಿ, ದೆಹಲಿಯ ಮೂರು ಹಳದಿ ಮೆಟ್ರೋ ಲೈನ್ ಗಳಾದ ವಿಶ್ವವಿದ್ಯಾಲಯ, ಸಿವಿಲ್ ಲೈನ್ಸ್ ಮತ್ತು ವಿಧಾನಸಭೆ ಮಾರ್ಗ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.